ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ‘ಸಂಸದ್ ಚಲೋ’ ಪ್ರತಿಭಟನೆ ವೇಳೆ ದೆಹಲಿ ಪೊಲೀಸರ (Delhi Police) ಲಾಠಿಚಾರ್ಜ್ ಮತ್ತು ಬಲಪ್ರಯೋಗದ ವಿರುದ್ಧ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಳ್ಳಲು ಸುಪ್ರೀಂ ಕೋರ್ಟ್ (Supreme Court) ಬುಧವಾರ ನಿರಾಕರಿಸಿದೆ. ಅರ್ಜಿದಾರ ವಕೀಲರು ಪೊಲೀಸರ ಕೃತ್ಯವನ್ನು ಸಾಬೀತುಪಡಿಸಲು ವಿಡಿಯೋ ಸಾಕ್ಷ್ಯಗಳನ್ನು ಸಲ್ಲಿಸಲು ಮುಂದಾದಾಗ, ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ, ನಿಮ್ಮ ಸಮಯವನ್ನೂ ಹಾಳು ಮಾಡಿಕೊಳ್ಳಬೇಡಿ ಎಂದು ಸಿಜೆಐ ಎಚ್ಚರಿಸಿದರು.
ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ವಕೀಲರು ಕೋರಿದಾಗ, “ನಮಗೆ ವಿಡಿಯೋಗಳನ್ನು ನೋಡುವ ಆಸಕ್ತಿಯಿಲ್ಲ, ಅದನ್ನು ನೋಡಲು ನಮ್ಮ ಬಳಿ ಸಮಯವೂ ಇಲ್ಲ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠ ತಿಳಿಸಿತು.
‘ಸಂಸದ್ ಚಲೋ’ ಮೆರವಣಿಗೆಯ ವೇಳೆ ದೆಹಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಈ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪೊಲೀಸರ ಅತಿಯಾದ ಬಲಪ್ರಯೋಗವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರ ಪೀಠವೂ ಕೂಡ ಈ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಕೋರ್ಟ್ ಅನ್ನು ಈ ವಿಷಯಗಳಿಗೆ ಎಳೆದು ತರಬೇಡಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

