ಧರ್ಮಸ್ಥಳದಲ್ಲಿ (Dharmasthala) ಗ್ರಾಮ ಸಮೀಪದ ಪಾಂಗಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮತ್ತೆ ಹಿನ್ನಡೆಯಾಗಿದೆ. ಪರಿಹಾರ ಧನಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್‌ನ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ವಜಾಗೊಳಿಸಿದೆ. ಪರಿಹಾರ ಧನಕ್ಕೆ ಅರ್ಹ ಎಂದು ಅನ್ನಿಸಿದ್ರೆ ಕೆಳ ಹಂತದ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಆದೇಶಿಸಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ (Santhosh Rao) ಖುಲಾಸೆಗೊಂಡ ಬಳಿಕ ಪರಿಹಾರ ಧನಕ್ಕಾಗಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧಿಸಿದಂತೆ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ವಿಶೇಷ ಕೋರ್ಟ್ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಸಿಬಿಐ ಅಧಿಕಾರಿಗಳು ಸಂತೋಷ್ ರಾವ್ (Santhosh Rao) ವಿರುದ್ಧದ ಆರೋಪ ಸಾಬೀತು ಪಡಿಸಲು ವಿಫಲ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಸಂತೋಷ್ ರಾವ್ ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು.

