ಪುತ್ತೂರು ವಿಧಾನಸಭಾ ಕ್ಷೇತ್ರದ ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪುತ್ತೂರು–ಕಡಬ–ಸುಳ್ಯ ಪ್ರದೇಶಗಳ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪುತ್ತಿಲ ಪರಿವಾರದ ನಿಯೋಗವು ಭೇಟಿ ನೀಡಿ, ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹಿಸಲಾಗುತ್ತಿರುವ ತ್ಯಾಜ್ಯವು ಘಟಕದಲ್ಲಿ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಿಯೋಗವು ಘಟಕಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಘಟಕದ ಕಾರ್ಯನಿರ್ವಹಣೆ, ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಸ್ಥಳದಲ್ಲೇ ನಿಯೋಗವು ವೀಕ್ಷಿಸಿತು.

ಘಟಕದಲ್ಲಿ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು ಹಾಗೂ ಹೆಚ್ಚುವರಿ ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿಯೋಗದ ವತಿಯಿಂದ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು. ನಂತರ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರೊಂದಿಗೆ ಮಾತುಕತೆ ನಡೆಸಿ, ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹಿಸಲಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಘಟಕಕ್ಕೆ ಸಾಗಿಸಲು ಹೆಚ್ಚುವರಿ ವಾಹನಗಳನ್ನು ನಿಯೋಜಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರದ ನಿಯೋಗ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ರಾಜು ಶೆಟ್ಟಿ, ಸಂತೋಷ್ ರೈ ಕೋರಂಗ ಉಪಸಿತರಿದ್ದರು.

