ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶದಲ್ಲಿ(Himachal Pradesh) ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಮೇಲಿನ ದರ 60 ಪೈಸೆ ಹೆಚ್ಚಳವಾಗಿದೆ. ವಿಧವಾ ಮತ್ತು ಅನಾಥ ಕಲ್ಯಾಣ ಸೆಸ್ (Widow and Orphan Cess) ಹೆಸರಿನಲ್ಲಿ 60 ಪೈಸೆ ಕರ ಸಂಗ್ರಹಿಸಲು ಸುಖ್ವಿಂದರ್ ಸಿಂಗ್(Sukhvinder Singh Sukhu) ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮುಂದಾಗಿದೆ. ಕಲ್ಯಾಣ ನಿಧಿಯ ಹೆಸರಿನಲ್ಲಿ ಸಾಮಾನ್ಯ ಸಾರ್ವಜನಿಕರು, ಟ್ಯಾಕ್ಸಿ ಚಾಲಕರು, ರೈತರು ಸೇರಿದಂತೆ ಪ್ರತಿಯೊಬ್ಬ ವಾಹನ ಸವಾರರ ಮೇಲೆಯೂ ಈ ತೆರಿಗೆಯ ಹೊರೆ ಬಿದ್ದಿದೆ. ಪೆಟ್ರೋಲಿಯಂ ಡೀಲರ್‌ಗಳ ಸಂಘವು ಸರ್ಕಾರದ ಈ ಕ್ರಮವನ್ನು ಖಂಡಿಸಿದೆ.
ದರ ಏರಿಕೆಗೆ ಬಿಜೆಪಿ ಖಂಡನೆ
ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಡೀಸೆಲ್ ಮೇಲಿನ ವ್ಯಾಟ್ ಅನ್ನು ಎರಡು ಬಾರಿ (ತಲಾ 3 ರೂ.) ಹೆಚ್ಚಿಸಲಾಗಿದೆ. ಪ್ರಸ್ತುತ ಜಾರಿಯಾದ ಸೆಸ್ ಸೇರಿ ಒಟ್ಟಾರೆಯಾಗಿ ಡೀಸೆಲ್ ದರ 15.40 ರೂ. ರಷ್ಟು ಏರಿಕೆಯಾದಂತಾಗಿದೆ. ಈ ಮೂಲಕ ಸರ್ಕಾರ ವರ್ಷಕ್ಕೆ 1,000 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಆದಾಯ ಸಂಗ್ರಹಿಸಲು ಹೊರಟಿದ್ದು, ಇದು ಸಾಮಾನ್ಯ ಜನರ ಜೇಬಿಗೆ ನೇರ ಹೊಡೆತ ನೀಡಿದೆ ಎಂದು ಹೇಳಿದ್ದಾರೆ.
ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ದುಪ್ಪಟ್ಟು ಕಿತ್ತುಕೊಂಡ ಸರ್ಕಾರ!
ಇತ್ತೀಚಿನ ವರದಿಗಳ ಪ್ರಕಾರ, ಹಿಮಾಚಲ ಪ್ರದೇಶವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ರಾಜ್ಯದ ಒಟ್ಟು ಸಾಲ 1,04,000 ಕೋಟಿ ರೂ. ದಾಟಿದ್ದು, 2026-27ನೇ ಸಾಲಿನಲ್ಲಿ 13,000 ಕೋಟಿ ರೂ. ಸಾಲ ಮರುಪಾವತಿಸಬೇಕಿದೆ. ಸರ್ಕಾರಿ ನೌಕರರ ವೇತನ ವಿಳಂಬ ಹಾಗೂ ತೀವ್ರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಹೊಸ ಸೆಸ್ ಮೂಲಕ ಆದಾಯ ಕ್ರೋಢೀಕರಿಸಲು ಈಗ ಮುಂದಾಗಿದೆ. ವಿಧಾನಸಭಾ ಚುನಾವಣೆ ಗೆಲ್ಲಲು ಕರ್ನಾಟಕದಂತೆ ಹಿಮಾಚಲ ಕಾಂಗ್ರೆಸ್ ಭರಪೂರ ಉಚಿತ ಕೊಡುಗೆಗಳನ್ನು ಪ್ರಕಟಿಸಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ಹೊರೆಯನ್ನು ನಿರ್ವಹಿಸಲು ತನ್ನ ಜನಪ್ರಿಯ ಸಬ್ಸಿಡಿ ಹಾಗೂ ಉಚಿತ ಕೊಡುಗೆ ಯೋಜನೆಗಳನ್ನು ಗಣನೀಯವಾಗಿ ಕಡಿತಗೊಳಿಸಿದೆ. ಹಲವು ಸೇವೆಗಳ ದರ ಏರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರಿಗೂ ನೀಡಲಾಗುತ್ತಿದ್ದ ಉಚಿತ ನೀರು ಸರಬರಾಜನ್ನು ಹಿಂಪಡೆಯಲಾಗಿದೆ. ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಮೂಲ ಯೋಜನೆಯನ್ನು ಸರ್ಕಾರ ಬದಲಾಯಿಸಿದೆ.
ಮುಂದಿನ ನಿಲ್ದಾಣ ಕರ್ನಾಟಕ?
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಹ ಬೊಕ್ಕಸದ ಆದಾಯ ಹೆಚ್ಚಿಸಲು ಈ ಹಿಂದೆ ಇಂಧನದ ಮೇಲಿನ ಮಾರಾಟ ತೆರಿಗೆಯನ್ನು (KST/VAT) ಪರಿಷ್ಕರಿಸಿತ್ತು, ಸದ್ಯ ಪೆಟ್ರೋಲ್ ಮೇಲೆ ಶೇ. 29.84 ಮತ್ತು ಡೀಸೆಲ್ ಮೇಲೆ ಶೇ. 21.17 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. ಸರ್ಕಾರವು ಹಂತ-ಹಂತವಾಗಿ ಈ ತೆರಿಗೆ ದರವನ್ನು ಹೆಚ್ಚಿಸಿದೆ. 2024ರಲ್ಲಿ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 25.92 ರಿಂದ ಶೇ. 29.84 ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 14.34 ರಿಂದ ಶೇ. 18.44 ಕ್ಕೆ ಏರಿಸಲಾಗಿತ್ತು. ತದನಂತರ ಏಪ್ರಿಲ್ 2025 ರಲ್ಲಿ ಡೀಸೆಲ್ ಮೇಲಿನ ತೆರಿಗೆಯನ್ನು ಮತ್ತೊಮ್ಮೆ ಶೇ. 21.17 ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಸುಮಾರು ₹110 ಕ್ಕಿಂತ ಹೆಚ್ಚಾಗಿದ್ದು, ಡೀಸೆಲ್ ದರ ₹98 ರಿಂದ ₹100 ರ ಆಸುಪಾಸಿನಲ್ಲಿದೆ. ಈಗ ಮತ್ತೊಮ್ಮೆ ದರ ಏರಿಕೆಯಾದರೂ ಅಚ್ಚರಿಯಿಲ್ಲ.

