ಧರ್ಮಸ್ಥಳ ಸೌಜನ್ಯ ಪ್ರಕರಣ (soujanya murder case) ಮರು ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸಂಜಯ್ಕುಮಾರ್ ಪೀಠ ಮರು ತನಿಖೆಗೆ ಆದೇಶಿಸಿದ್ದು, ಹೊಸ ಎಸ್ಐಟಿ ರಚಿಸಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಈ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (CBI) ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದೆ.

