ಉಗ್ರ ಸಂಘಟನೆ ಐಸಿಸ್ಗೆ (ISIS) ಹಣಕಾಸಿನ ನೆರವು ನೀಡಿದ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ 8 ಪ್ರಮುಖ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್ಐಆರ್ ಹಾಗೂ ಚಾರ್ಜ್ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಕೈಗೆತ್ತಿಕೊಂಡು ಈ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರಿನ ಪ್ರೇಜರ್ ಟೌನ್, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಕಮ್ಮನಹಳ್ಳಿಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್ಕೈಂಡ್ ಟ್ರಸ್ಟ್ ಸಂಬಂಧಿಸಿದ ಹಣ ಉಗ್ರ ಚಟುವಟಿಕೆಗಳಿಗೆ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತದತ್ತ ಆಕರ್ಷಿಸಲು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಾಸ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದರು. ಇದರ ಮೂಲಕ ಬೆಳೆದ ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಯುವಕರನ್ನು ಗುರುತಿಸಿ ಬ್ರೇನ್ವಾಶ್ ಮಾಡಲಾಗುತ್ತಿತ್ತು. ತಮ್ಮ ಸ್ವಂತ ಉಳಿತಾಯ, ಖಾಸಗಿ ವ್ಯಕ್ತಿಗಳು ಹಾಗೂ ‘ಇಕ್ರಾ ವೆಲ್ಫೇರ್ ಟ್ರಸ್ಟ್’ ಮತ್ತು ‘GFM ಟ್ರಸ್ಟ್’ ಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು. ಈ ಹಣವನ್ನು ಯುವಕರ ನೇಮಕಾತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಸಿಎಎ (CAA) ಮತ್ತು ಎನ್ಆರ್ಸಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡಲಾಗಿತ್ತು.
ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಎನ್ಐಎ ಮೊಹಮದ್ ತಾಖೀರ್, ಝೋಯೇಬ್ ಮನ್ನಾ, ಇರ್ಫಾನ್ ನಾಸಿರ್, ಮೊಹಮದ್ ಸಾಹಿಬ್, ಅಹಮದ್ ಅಬ್ದುಲ್ ಕೇಡರ್ನನ್ನು ಬಂಧಿಸಿದೆ. ಈ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.ಆರೋಪಿಗಳು ದುಬೈ ಮತ್ತು ಲಂಡನ್ಲ್ಲಿ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇ.ಡಿ ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ

