ಸಂಸತ್ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ (CJP) ಸದಸ್ಯರ ಮೇಲೆ ಪೊಲೀಸರು ಲಾಠಿಚಾರ್ಜ್(Lathi Charge) ಮಾಡಿದ್ದಾರೆ. ಲಾಠಿಚಾರ್ಜ್ ಬೆನ್ನಲ್ಲೇ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಂಡಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ, ನವದೆಹಲಿ ವ್ಯಾಪಕ ಉದ್ವಿಗ್ನತೆಗೆ ಸಾಕ್ಷಿಯಾಯಿತು. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಆಯೋಜಿಸಿದ್ದ “ಚಲೋ ಸಂಸದ್” ಮೆರವಣಿಗೆಯನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ಸಂಭವಿಸಿತು. ದೆಹಲಿ ಪೊಲೀಸರು ಈ ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ನೀಡಿರಲಿಲ್ಲ. ಆದೇಶವನ್ನು ಉಲ್ಲಂಘಿಸಿ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪರಿಸ್ಥಿತಿ ಕೈಮೀರಿ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಂಸತ್ತಿನ ಅಧಿವೇಶನ ಆರಂಭವಾಗುತ್ತಿರುವುದರಿಂದ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 163 (ಹಳೆಯ 144ನೇ ವಿಧಿ) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಮೆರವಣಿಗೆಗೆ ಯಾವುದೇ ಅಧಿಕೃತ ಅನುಮತಿ ನೀಡಿರಲಿಲ್ಲ ಮತ್ತು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮುಂಚಿತವಾಗಿಯೇ ಎಚ್ಚರಿಸಿದ್ದರು.

