ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧವನ್ನು ವಿಧಿಸುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ- 1958ರ ಸೆಕ್ಷನ್ 4ರ ಅಡಿಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಹಸುವನ್ನು ವಧೆ ಮಾಡಲು ಅವಕಾಶ ನೀಡುತ್ತದೆ. ಆದರೆ ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ 1958ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯವು ವಾದಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಅವರು ಅದನ್ನು ತಡೆಯುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನೂ ಉಲ್ಲೇಖಿಸಿತ್ತು.
ರಾಜ್ಯ ಸರಕಾರವು ತನ್ನ ಮನವಿಯಲ್ಲಿ ಹೈಕೋರ್ಟ್ ಗೋಹತ್ಯೆ ನಿಷೇಧವನ್ನು ನಿರ್ದೇಶಿಸುವ ಮೂಲಕ ಕಾನೂನಿನ ಚೌಕಟ್ಟನ್ನು ಮೀರಿದೆ ಎಂದು ವಾದಿಸಿದೆ.

