ಪುತ್ತೂರು: ಆ.7ರಂದು(ನಾಳೆ) ಪುತ್ತೂರಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವರು ಹಾಗೂ ಪರಿಷತ್ ಸದಸ್ಯರಾದ ಸಿ.ಟಿ.ರವಿ ಭಾಗವಹಿಸಲಿದ್ದಾರೆ. ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಒಳಜಗಳದ ಮಧ್ಯೆ ಈ ಯಾತ್ರೆಯು ಅತ್ಯಂತ ಮಹತ್ವವನ್ನು ಪಡೆದಿದೆ.
ಆ.7ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಮುಂಭಾಗದಿಂದ ಯಾತ್ರೆ ಆರಂಭಗೊಂಡು ನಗರದ ಕಿಲ್ಲೆ ಮೈದಾನದವರೆಗೆ ನಡೆಯಲಿದೆ. ರಾಷ್ಟ್ರಧ್ವಜ ಹಿಡಿದು 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವರು. ಸಭಾ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ, ಸಿ.ಟಿ.ರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪ್ರಮುಖರು ಭಾಗವಹಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿತ್ತು. ಆದರೆ ಮಹತ್ತರ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಗಮನ ಬಹುತೇಕ ಅನುಮಾನ ಎನ್ನಲಾಗಿದೆ. ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಪ್ರಸ್ತುತ ಪುತ್ತೂರಿನ ಟೌನ್ ಹಾಲ್ಗೆ ಶಿಫ್ಟ್ ಮಾಡಲಾಗಿದೆ.
ತಿರಂಗಾ ಯಾತ್ರೆಗೆ ಐದು ಸಾವಿರ ಜನ ಸೇರಿಸುವ ಗುರಿ; ಶೈಕ್ಷಣಿಕ ಸಂಸ್ಥೆಯಿಂದ ವಿದ್ಯಾರ್ಥಿಗಳನ್ನು ಕರೆ ತರಲು ಯೋಜನೆ
ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಕನಿಷ್ಠ ಐದು ಸಾವಿರ ಸಂಖ್ಯೆಯನ್ನು ಸೇರಿಸುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿತ್ತು. ಜಿಲ್ಲೆಯ ಎಲ್ಲಾ ಮಂಡಲದಿಂದ ಪಕ್ಷದ ಪದಾಧಿಕಾರಿಗಳಿಗೆ ಭಾಗವಹಿಸಲು ಸೂಚಿಸಲಾಗಿದೆ. ಪಕ್ಷದ ಬ್ಯಾನರ್ ಹಾಗೂ ಧ್ವಜರಹಿತ ಕಾರ್ಯಕ್ರಮ ಇದಾಗಿದ್ದು, ಸಂಖ್ಯಾ ದೃಷ್ಟಿಯಿಂದ ಶೈಕ್ಷಣಿಕ ಸಂಸ್ಥೆಗಳನ್ನು ಭೇಟಿಯಾಗಿ ವಿದ್ಯಾರ್ಥಿಗಳನ್ನು ಈ ಯಾತ್ರೆಯಲ್ಲಿ ಜೋಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯೊಂದು ಕಾಲೇಜು ಯೂನಿಫಾರ್ಮ್ ಹಾಗೂ ಐಡಿ ಕಡ್ಡಾಯವಲ್ಲವೆಂದು ಸೂಚಿಸಿದ್ದು, ತಿರಂಗಾ ಯಾತ್ರೆಯಲ್ಲಿ ನೀಡುವ ಜೆರ್ಸಿ ಧರಿಸಿ ಪಾಲ್ಗೊಳ್ಳುವಂತೆ, ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ವಾಟ್ಸಾಪ್ ಫಾರ್ಮಾನು ಹೊರಡಿಸಿದೆ.
ಅಟಲ್ ವಿರಾಸತ್ ಬಳಿಕ ಪುತ್ತೂರು ಕೇಂದ್ರೀಕೃತವಾಗಿ ಮತ್ತೊಂದು ಕಾರ್ಯಕ್ರಮ
ಪುತ್ತೂರಿನಲ್ಲಿ 2025ರ ನವೆಂಬರ್ 19 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ಧಿ ಅಂಗವಾಗಿ ಬೃಹತ್ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು. ಆದರೆ ಈ ಕಾರ್ಯಕ್ರಮದ ಹಿಂದಿನ ಬೆಳವಣಿಗೆಗಳು ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಶೀತಲ ಸಮರಕ್ಕೆ ಮತ್ತೊಮ್ಮೆ ನಾಂದಿ ಹಾಡಿತ್ತು.

2023 ರ ಚುನಾವಣೆಯಲ್ಲಿ ಬಿಜೆಪಿಯನ್ನು ಭದ್ರಕೋಟೆಯಲ್ಲಿಯೇ ಮೂರನೇ ಸ್ಥಾನಕ್ಕೆ ತಳ್ಳಿದ್ದ ಪುತ್ತಿಲರು, 2024ರ ಲೋಕಸಭೆ ಚುನಾವಣೆಗೆ ಮುನ್ನ ಮೋದಿಗೆ ಬೆಂಬಲ ಸೂಚಿಸಿ ಪಕ್ಷದ ಮುಖ್ಯವಾಹಿನಿಗೆ ಮರಳಿದ್ದರು. ಅದಕ್ಕೂ ಮುನ್ನ ಜಿಲ್ಲಾಧ್ಯಕ್ಷರ ಜತೆ ರಾಜ್ಯಾಧ್ಯಕ್ಷರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದರು. ಈ ಸಭೆಯಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು. ಅಖಂಡ ಪುತ್ತೂರು ಮಂಡಲದ ಸಾರಥ್ಯ ನೀಡಿದರೆ ಪುತ್ತೂರು ಕ್ಷೇತ್ರವನ್ನು ಗೆಲ್ಲಿಸಿ ಕೊಡುವೆ ಎಂದಿದ್ದರು. ಲೋಕಸಭೆಯಲ್ಲಿ ಪಕ್ಷದ ಅಭ್ಯರ್ಥಿಯಾದ ಕ್ಯಾ. ಬ್ರಿಜೇಶ್ ಚೌಟರ ಗೆಲುವಿಗೆ ಪುತ್ತಿಲರ ತಂಡ ಸಾಕಷ್ಟು ಶ್ರಮಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಪಕ್ಷವು ಅವರನ್ನು ಕಡೆಗಣಿಸಿತ್ತು. ಇದು ಪುತ್ತಿಲರ ಬೆಂಬಲಿಗರಲ್ಲಿ ತೀವ್ರ ಆಕ್ರೋಶ ಸೃಷ್ಟಿಸಿತ್ತು. ಪಕ್ಷದ ಕಾರ್ಯಕ್ರಮಗಳಿಗೆ ಆರಂಭಿಕ ದಿನಗಳಲ್ಲಿ ಆಹ್ವಾನ ನೀಡುತ್ತಿದ್ದವರು, ಬಳಿಕದ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಿಂದ ಪುತ್ತಿಲರನ್ನು ದೂರ ಇಡುವ ಪ್ರಯತ್ನವನ್ನು ಸ್ವಯಂಘೋಷಿತ ನಾಯಕರು ಮಾಡಿದ್ದರು. ಇದರಿಂದ ಬೇಸೆತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದ್ದ ಪುತ್ತೂರಿನ ಅಟಲ್ ವಿರಾಸತ್ ಸಮಾವೇಶವನ್ನು ಪುತ್ತಿಲ ಸಹಿತ ಅವರ ಪರಿವಾರವೇ ಬಹಿಷ್ಕರಿಸಿತ್ತು.
ತಿರಂಗಾ ಯಾತ್ರೆಯ ನೆಪದಲ್ಲಿ ಪುತ್ತೂರು ಬಿಜೆಪಿಗೆ ಬೂಸ್ಟ್ ನೀಡಲು ಸಿದ್ಧತೆ
ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರು ಇಂದು ಸಂಘಟನಾತ್ಮಕವಾಗಿ ದುರ್ಬಲವಾಗಿದೆ. ಇದಕ್ಕಾಗಿ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಆಗಮಿಸಿ ‘ಚರೈವೇತಿ’ ಎಂದು ಸೂಚಿಸಿದ್ದರು. ವಾಸ್ತವವಾಗಿ ಇಂದು ಪುತ್ತೂರಿನ ಎರಡು ಮಂಡಲದ ಹಲವಾರು ಬೂತ್ ಸಮಿತಿಯಲ್ಲಿ ಕೆಲಸ ಮಾಡಲು ಯುವ ಕಾರ್ಯಕರ್ತರ ಕೊರತೆಯನ್ನು ಪಕ್ಷ ಎದುರಿಸುತ್ತಿದೆ. ಅತ್ತ ಪುತ್ತಿಲರು ಮುಂದಿನ ಚುನಾವಣೆಗಾಗಿ ಸಕಲ ಸಿದ್ಧತೆಯನ್ನು ನಡೆಸಿದ್ದು, ಮಂಡಲದ ಶೇಕಡಾ 90 ರಷ್ಟು ಬೂತ್ ಸಮಿತಿಯನ್ನು ರಚಿಸಲಾಗಿದ್ದು, ಪ್ರತಿ ಬೂತಿನಲ್ಲೂ ಉತ್ಸಾಹಿ ತರುಣರ ತಂಡ ಸಿದ್ಧಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಾಸಕ ಅಶೋಕ್ ರೈ ಅವರಿಗೆ ವಿಪಕ್ಷ ನಾಯಕನಾಗಿ ಪುತ್ತಿಲರು ಪ್ರಬಲವಾಗಿ ಕೌಂಟರ್ ನೀಡಲು ಆರಂಭಿಸಿದ್ದು, ಇದರಿಂದಾಗಿ ಬಿಜೆಪಿ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಹೆಚ್ಚಿನ ಯುವ ಕಾರ್ಯಕರ್ತರು ಪುತ್ತಿಲರ ಪರ ನಿಂತಿದ್ದಾರೆ. ಪುತ್ತಿಲರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕೆಂಬುದು ಪಕ್ಷದ ತಳಮಟ್ಟದ ಕಾರ್ಯಕರ್ತರ ಆಶಯವಿದ್ದರೂ, ಬಿಜೆಪಿ ಪಕ್ಷದ ಹಾಗೂ ಸಂಘಟನೆಯ ಕೆಲ ನಾಯಕರ ಪ್ರತಿಷ್ಠೆ ಈ ಗೊಂದಲವನ್ನು ಸರಿ ಮಾಡಲು ಬಿಡುತ್ತಿಲ್ಲ. ಇವೆಲ್ಲದರ ಮಧ್ಯೆ ನಾಳೆ ನಡೆಯುವ ತಿರಂಗಾ ಯಾತ್ರೆ ಬಹು ಪ್ರಮುಖ್ಯತೆ ಪಡೆದಿದೆ.

