ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯ ತಾಲೂಕಿನ ಕಲ್ಲುಮುಟ್ಲು ನಿವಾಸಿ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಎನ್ಐಎ ಮುಂದುವರಿಸಿದೆ. ಈತ ಪ್ರಕರಣದ ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಆರೋಪದಡಿ 13ನೇ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದಾನೆ. ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಈ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುತ್ತಿದ್ದು, ಇದುವರೆಗೂ 24 ಆರೋಪಿಗಳನ್ನು ಬಂಧಿಸಲಾಗಿದೆ, ಆರು ಮಂದಿ ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಎನ್ಐಎ ತಲಾ ₹2 ಲಕ್ಷ ಬಹುಮಾನ ಘೋಷಿಸಿತ್ತು. ಇತ್ತೀಚೆಗೆ, ಜುಲೈ 11ರಂದು ಎನ್ಐಎ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನೌಷದ್ ಮತ್ತು ನಾಸೀರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಉಮರ್ ಫಾರೂಕ್ ಕೊಚ್ಚಿಯಲ್ಲಿ ಅಡಗಿರುವ ಮಾಹಿತಿ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 25ಕ್ಕೆ ಏರಿದೆ.
ನೆಟ್ಟಾರು ಹತ್ಯೆಯ ಹಿಂದಿನ ಪಿತೂರಿಯ ಸಂಬಂಧ ಫಾರೂಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಈ ಹಿಂದೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಎನ್ಐಎ ತನಿಖೆಯ ಪ್ರಕಾರ, ಫಾರೂಕ್ ಸುಳ್ಯ ಪಟ್ಟಣದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಯಲ್ಲಿ ನಡೆದ ಪಿತೂರಿ ಸಭೆಯಲ್ಲಿ ಇತರ ಆರೋಪಿಗಳೊಂದಿಗೆ ಭಾಗವಹಿಸಿದ್ದರು. ಕೊಲೆಗೆ ಮೊದಲು ಬೆಳ್ಳಾರೆ ಗ್ರಾಮದಲ್ಲಿ ಸಂಭಾವ್ಯ ಗುರಿಗಳನ್ನು ಗುರುತಿಸಲು ಮತ್ತು ವಿಚಕ್ಷಣ ನಡೆಸಲು ಫಾರೂಕ್ ತನ್ನ ಮೋಟಾರ್ಸೈಕಲ್ ಅನ್ನು ಸಹ-ಆರೋಪಿಗೆ ನೀಡಲು ಒಪ್ಪಿಕೊಂಡಿದ್ದರು ಎಂದು ಸಂಸ್ಥೆ ಆರೋಪಿಸಿದೆ. “ಪ್ರಕರಣದಲ್ಲಿ ಸಂರಕ್ಷಿತ ಸಾಕ್ಷಿಯನ್ನು ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ಫಾರೂಕ್ ಇತರ ಸಹ-ಆರೋಪಿಗಳೊಂದಿಗೆ ಭಾಗವಹಿಸಿದ ಆರೋಪವೂ ಇದೆ” ಎಂದು ಎನ್ಐಎ ಹೇಳಿದೆ.
ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದರು. ಇವರನ್ನು 2022ರ ಜುಲೈ 26ರಂದು ಅವರ ಕೋಳಿ ಅಂಗಡಿಯ ಮುಂಭಾಗದಲ್ಲೇ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣವು ರಾಜ್ಯಾದ್ಯಂತ ಭಾರೀ ಸಂಚಲನ ಮತ್ತು ರಾಜಕೀಯ ತಲ್ಲಣಗಳನ್ನು ಸೃಷ್ಟಿಸಿತ್ತು. ಈ ಹತ್ಯೆಯು ಈ ಹಿಂದೆ ನಡೆದಿದ್ದ ಮಸೂದ್ ಎಂಬ ಯುವಕನ ಕೊಲೆಗೆ ಪ್ರತೀಕಾರವಾಗಿ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಿಷೇಧಿತ ಸಂಘಟನೆಯಾದ ಪಿಎಫ್ಐ (PFI) ಸದಸ್ಯರು ಈ ಹತ್ಯೆಯ ಸಂಚು ರೂಪಿಸಿದ್ದರು.

