ತಮಿಳುನಾಡು: ನಟಿ ತ್ರಿಷಾ (Trisha) ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಡುವೆಯೇ ತಮಿಳುನಾಡು (Tamil Nadu) ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್ ಹಾಗೂ ತ್ರಿಷಾ ಕುರಿತು ಅಸಭ್ಯವಾಗಿ ಮಾತನಾಡಿದ್ದರು ಎಂದು ಟಿವಿಕೆ ಕಾರ್ಯಕರ್ತರು ದೂರು ನೀಡಿದ್ದರು.
ಉದಯನಿಧಿ ಸ್ಟಾಲಿನ್ ಅವರು ಸಿಎಂ ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಡಬಲ್ ಮೀನಿಂಗ್ ಬರುವ ರೀತಿಯಲ್ಲಿ ಮಾತನಾಡಿದ್ದರು. “ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ವಿಜಯ್ ಅವರಿಗೆ ಅದರ ಬಗ್ಗೆ ಯಾವುದೇ ಕಾಳಜಿಯಿಲ್ಲ” ಎಂದು ಹೇಳುವಾಗ ಅಭಿಮಾನಿಯೊಬ್ಬ ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದ. ಈ ವೇಳೆ ಸ್ಟಾಲಿನ್ ಅಸಭ್ಯವಾಗಿ ತ್ರಿಷಾ ಕುರಿತು ಮಾತನಾಡಿದ್ದಾರೆ ಎಂದು ಟಿವಿಕೆ ಆರೋಪಿಸಿತ್ತು. ಪ್ರತಿಭಟನೆಗಳು ಹಾಗೂ ಆಕ್ರೋಶದ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಉದಯನಿಧಿ ಅವರ ಚೆನ್ನೈ ನಿವಾಸಕ್ಕೆ ಮುತ್ತಿಗೆ ಹಾಕಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಉದಯನಿಧಿ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಂಧನದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಉದಯನಿಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮುಖ್ಯಮಂತ್ರಿಯನ್ನು ಬಿಟ್ಟರೆ ಬೇರೆ ಯಾರ ಹೆಸರನ್ನೂ ಹೇಳಿಲ್ಲ. ಇದು ರಾಜಕೀಯ ಪ್ರತೀಕಾರದ ಕ್ರಮ. ಈ ವಿಚಾರದ ಅಂತಿಮ ತೀರ್ಪನ್ನು ನ್ಯಾಯಾಲಯವೇ ನೀಡಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ

