ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ವಿವಾದಗಳು ಹಾಗೂ ಭಕ್ತರ ಆಕ್ರೋಶಗಳು ವ್ಯಕ್ತವಾಗಿವೆ. ದೇವಳದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಕ್ತರು ಶಾಸಕರ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಭಕ್ತರ ಸಭೆಯನ್ನು ಶ್ರೀ ಮಹಾಲಿಂಗೇಶ್ವರ ಸಭಾಗೃಹದಲ್ಲಿ ನಾಳೆ (ಅಗಸ್ಟ್ 3, 2026) ಆಯೋಜಿಸಲಾಗಿದೆ. ದೇವಾಲಯದ ಪವಿತ್ರತೆಯ ಸಂರಕ್ಷಣೆ ಹಾಗೂ ದೇವಾಲಯದ ಜಾಗ ಉಳಿವಿಗಾಗಿ ಪ್ರಸ್ತಾವಿತ ಯೋಜನೆಗೆ ಸಮಿತಿ ವಿರೋಧ ವ್ಯಕ್ತಪಡಿಸಿದ್ದು, ಭಕ್ತರ ಅಭಿಪ್ರಾಯದ ಮೇರೆಗೆ, ದೇವರ ಒಪ್ಪಿಗೆ ಮೇರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಮಿತಿ ತಿಳಿಸಿದೆ.

ಸಾರ್ವಜನಿಕ ರಸ್ತೆಗಾಗಿ ದೇವಸ್ಥಾನದ ಬೆಲೆ ಬಾಳುವ ಮೂರು ಎಕರೆ ಜಾಗ ಬಳಸುತ್ತಿರುವ ಕುರಿತು ಭಕ್ತಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇಂದಿನ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಮೂವತ್ತು ಕೋಟಿಗೂ ಅಧಿಕವಾಗಿದೆ ಎನ್ನಲಾಗಿದೆ. ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸುವುದರಿಂದ ಶಾಂತವಾಗಿರುವ ದೇಗುಲ ಪರಿಸರವು ವಾಹನಗಳ ಕರ್ಕಶ ಧ್ವನಿಯಿಂದ ಶಬ್ಧ ಮಾಲಿನ್ಯಕ್ಕೂ ಆಸ್ಪದ ನೀಡಿದಂತಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಆ ರಸ್ತೆಯಲ್ಲಿ ಅನ್ಯಮತೀಯರ ಮೆರವಣಿಗೆ ಹೋದರೂ ಯಾರು ಪ್ರಶ್ನಿಸಲಾರದ ಪರಿಸ್ಥಿತಿ ಬರುತ್ತದೆ ಎಂದು ಸಂಘಟನೆ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಗುಲಕ್ಕೆ ಸಂಬಂಧಿಸಿದಂತೆ ಹಲವು ತೀರ್ಮಾನವನ್ನು ಭಕ್ತರ ಒಪ್ಪಿಗೆಯಿಲ್ಲದೇ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗುತ್ತಿದೆ. ದೇವಸ್ಥಾನದ ಹಲವು ಕಾಮಗಾರಿಗಳು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನಂತೆ ಟೆಂಡರ್ ಪ್ರಕ್ರಿಯೆ ನಡೆಸದೆ ಕೈಗೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇವೆಲ್ಲಾ ಕಾರಣಗಳಿಂದ ನಾಳೆ ನಡೆಯುವ ಭಕ್ತ ಸಭೆಯು ಅತ್ಯಂತ ಮಹತ್ವ ಪಡೆದಿದೆ.

