ಜನ ಸುರಾಜ್ ಪಕ್ಷದ ಅಭ್ಯರ್ಥಿ ಪ್ರಶಾಂತ್ ಕಿಶೋರ್, ಬಿಜೆಪಿ ಭದ್ರಕೋಟೆಯಾಗಿದ್ದ ಬಂಕಿಪುರ ಉಪಚುನಾವಣೆ ಫಲಿತಾಂಶದಲ್ಲಿ 18000+ ಮತಗಳಿಂದ ಜಯಭೇರಿ ಬಾರಿಸಿದ್ದಾರೆ. ಏಪ್ರಿಲ್ನಲ್ಲಿ ರಾಜ್ಯಸಭೆಗೆ ಆಯ್ಕೆಯಾದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. 29 ಸುತ್ತುಗಳ ಮತ ಎಣಿಕೆ ಅಂತ್ಯಕ್ಕೆ ಪಿಕೆ (PK) 61,075 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಅವರಿಗಿಂತ 18,964 ಮತಗಳ ಮುನ್ನಡೆಯಲ್ಲಿದ್ದಾರೆ. ಕುಮಾರ್ 42,111 ಮತಗಳನ್ನು ಪಡೆದಿದ್ದರೆ, ಆರ್ಜೆಡಿ (RJD) ಅಭ್ಯರ್ಥಿ ರೇಖಾ ಕುಮಾರಿ 13,625 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
1995 ರಲ್ಲಿ ಪಾಟ್ನಾ ಪಶ್ಚಿಮ ಎಂದು ಕರೆಯಲ್ಪಡುತ್ತಿದ್ದಾಗಿನಿಂದ ಈ ವಿಧಾನಸಭಾ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಾಣದ ಬಿಜೆಪಿಗೆ ಇಂದು ಸೋಲಿನ ರುಚಿಯನ್ನು ತಮ್ಮ ಮೊದಲ ಚುನಾವಣೆಯಲ್ಲಿಯೇ ಪ್ರಶಾಂತ್ ಕಿಶೋರ್ ನೀಡಿದ್ದಾರೆ. ಚುನಾವಣಾ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅವರು ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರಲಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ನಾಮಪತ್ರ ಸಲ್ಲಿಸಿದ ಬಳಿಕ ಮೊದಲ ಬಿಜೆಪಿ ಅಭ್ಯರ್ಥಿ ಅಭಿಷೇಕ್ ಕುಮಾರ್ ಸಿನ್ಹಾ ಕಣದಿಂದ ಹಿಂದೆ ಸರಿದಿದ್ದರಿಂದ, ಅಂತಿಮ ಕ್ಷಣದಲ್ಲಿ ಯುವ ನಾಯಕ ನೀರಜ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇಲ್ಲಿ ಆರ್ಜೆಡಿಯಿಂದ ರೇಖಾ ಗುಪ್ತಾ ಕೂಡ ಕಣದಲ್ಲಿದ್ದರು. ಅಂತಿಮವಾಗಿ ಪ್ರಶಾಂತ್ ಕಿಶೋರ್ ಗೆದ್ದು ಬೀಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ತಾವು 5 ಬಾರಿ ಪ್ರತಿನಿಧಿಸಿದ್ದ ಸ್ವಕ್ಷೇತ್ರವನ್ನೇ ಗೆಲ್ಲಿಸಲಾಗದೆ ಮುಖಭಂಗ ಅನುಭವಿಸಿದ್ದಾರೆ.

ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಪ್ರಶಾಂತ್ ಕಿಶೋರ್ ವಿಶ್ವಸಂಸ್ಥೆಯ ಅನುದಾನಿತ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ಹಲವಾರು ಆರೋಗ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು. ವಿಶ್ವಸಂಸ್ಥೆಯಲ್ಲಿನ ಕೆಲಸವನ್ನು ತೊರೆದ ನಂತರ, ಪ್ರಶಾಂತ್ ಕಿಶೋರ್ ರಾಜಕೀಯದತ್ತ ಹೊರಳಿದರು. ಅವರು ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ) ಅನ್ನು ಸ್ಥಾಪಿಸಿದರು ಮತ್ತು ಚುನಾವಣಾ ಕಾರ್ಯತಂತ್ರದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು. ಅಕ್ಟೋಬರ್ 2, 2024 ರಂದು ತಮ್ಮದೇ ಆದ ರಾಜಕೀಯ ಪಕ್ಷವಾದ ಜಾನ್ ಸೂರಜ್ ಅನ್ನು ಸ್ಥಾಪಿಸಿದರು. ನಂತರ ಅವರು ಬಿಹಾರದಲ್ಲಿ ಸಂಘಟನೆಯನ್ನು ಬಲಪಡಿಸುವ ಅಭಿಯಾನವನ್ನು ಪ್ರಾರಂಭಿಸಿದರು.

