ಪುತ್ತೂರು: ನರಿಮೊಗರು – ಶಾಂತಿಗೋಡು ಮುಖ್ಯ ರಸ್ತೆ ದುರಸ್ತಿಗೆ ಸಾಲು ಸಾಲು ಮನವಿಗಳನ್ನು ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಧೋರಣೆಯನ್ನು ಖಂಡಿಸಿ, ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಮೊದಲ ದಿನವೇ ಆಡಳಿತ ಯಂತ್ರ ಶರಣಾಗಿದ್ದು, ರಸ್ತೆ ದುರಸ್ತಿಯ ಭರವಸೆಯನ್ನು ನೀಡಿದ್ದಾರೆ.

ಹೋರಾಟದ ಹಾದಿ ಹಿಡಿದ ಪುತ್ತಿಲ ಪರಿವಾರ
ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಜುಲೈ 23 ರಂದು ಪುತ್ತಿಲರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭೇಟಿ ಮಾಡಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆಡಳಿತಾತ್ಮಕ ಒತ್ತಡದ ಕಾರಣದಿಂದ ದುರಸ್ತಿಯಿಂದ ಅಧಿಕಾರಿಗಳು ಹಿಂದೆ ಸರಿದಿದ್ದರು. ಬಳಿಕ, ಜುಲೈ 27ರಂದು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಯೋಗ್ಯ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ನರಿಮೊಗರು ಪಂಚಾಯತ್ಗೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲೂ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಕಾರಣದಿಂದಾಗಿ ಸ್ಥಳಕ್ಕೆ ಭೇಟಿ ನೀಡಲು ಹಿಂಜರಿದಿದ್ದರು. ಪರಿಸ್ಥಿತಿ ಕೈ ಮೀರಿದಾಗ ಪಂಚಾಯತ್ ಕಾರ್ಯದರ್ಶಿ ಭೇಟಿ ನೀಡಿ ಮನವಿ ಸ್ವೀಕರಿಸಿದ್ದರು. ಆದರೆ ದಿನಗಳು ಕಳೆದರೂ ಕಾಮಗಾರಿ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಟ್ರಸ್ಟ್ ಅನಿರ್ದಿಷ್ಟಾವಧಿ ಧರಣಿಯ ಹಾದಿ ಹಿಡಿದಿತ್ತು. ಇದೀಗ ಕೊನೆಗೂ ಆಡಳಿತ ಯಂತ್ರ ಪುತ್ತಿಲ ಗುಡುಗಿಗೆ ಮಣಿದಿದ್ದು, ಕೆಲಸ ಆರಂಭದ ಭರವಸೆಯನ್ನು ನೀಡಿದೆ. 20,000 ರೂ ವೆಚ್ಚದಲ್ಲಿ ನಾಳೆಯೇ ಅರ್ಥ್ ವರ್ಕ್ ಮಾಡಿ. ಒಂದು ವಾರದೊಳಗೆ ವೆಟ್ ಮಿಕ್ಸ್ ಹಾಕಿ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡುತ್ತೇವೆ ಹಾಗೂ ಮಳೆ ನಿಂತ ತಕ್ಷಣ ಶಾಶ್ವತ ಪರಿಹಾರ ಮಾಡುವ ಮಾತನ್ನು ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಹೇಳಿದರು.

ಶಾಸಕರಿಗೆ ಪ್ರಬಲ ಸಂದೇಶ ರವಾನಿಸಿದ ಅರುಣ್ ಪುತ್ತಿಲ
ಇವತ್ತು ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ ಏನೇ ಸಮಸ್ಯೆ ಬಂದ್ರು ಕೂಡಾ ಕೇಳುವಂತ ಹಕ್ಕು ನಮಗಿದೆ.
ಯಾರು ಕೂಡಾ ಪ್ರಶ್ನೆ ಮಾಡುವ ಹಾಗಿಲ್ಲ, ಅವ ಯಾರು ಕೇಳುವವ, ಇವ ಯಾರು ಕೇಳುವವ ಅಂತ ಪ್ರಶ್ನೆ ಮಾಡುವಂತ ಅವಶ್ಯಕತೆ ಇಲ್ಲ. ಎಲ್ಲರಿಗೂ ಇದು ಎಚ್ಚರಿಕೆ ಅನೇಕ ಶಾಸಕರನ್ನು ನಾವು ನೋಡಿದ್ದೇವೆ, ಯಾರು ಕೂಡಾ ಮನೆಯಿಂದ ತಂದು ಅನುದಾನ ಹಾಕಿಲ್ಲ. ಮುಂದಿನ ದಿನಗಳಲ್ಲಿ 100 ಕೇಸುಗಳು ನನ್ನ ಮೇಲೆ ಹಾಕಿದರೂ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
– ಅರುಣ್ ಕುಮಾರ್ ಪುತ್ತಿಲ
ರಾಜಕೀಯ ಲೆಕ್ಕಾಚಾರ ಬುಡಮೇಲು ಮಾಡಿದ ಅರುಣ ಘರ್ಜನೆ
ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸರ್ವಾಧಿಕಾರಿ ಧೋರಣೆ, ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ನರಿಮೊಗರು ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಇಂದಿನ ದಿನ ಮೊಳಗಿದ ಅರುಣ್ ಪುತ್ತಿಲರ ಧ್ವನಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲವಾಗುವ ಸಾಧ್ಯತೆ ದಟ್ಟವಾಗಿದೆ. ಚುನಾವಣೆಯಲ್ಲಿ ವಿರೋಚಿತ ಸೋಲಿನ ಬಳಿಕ ಪುತ್ತಿಲರು ಕಾರ್ಯಕರ್ತರ ನೋವಿಗೆ, ಬಡವರ ಕಷ್ಟಕ್ಕೆ ಸ್ಪಂದಿಸುತ್ತಾ ಜನ ಸಾಮಾನ್ಯರ ನಡುವೆ ಕೆಲಸ ಮಾಡುತ್ತ ಬಂದಿದ್ದು, ಇದೀಗ ಪುತ್ತೂರು ಕ್ಷೇತ್ರದ ಸಮರ್ಥ ವಿರೋಧ ಪಕ್ಷದ ನಾಯಕನಾಗಿ ಅಶೋಕ್ ರೈ ಎದುರು ತಾಂಟಲು ರೆಡಿ ಆಗಿದ್ದಾರೆ. ಒನ್ ಮ್ಯಾನ್ ಶೋ ರೀತಿ ಹೋಗುತ್ತಿದ್ದ ಅಶೋಕ್ ರೈಗೆ ವೇಗಕ್ಕೆ ಇದೀಗ ಪುತ್ತಿಲರ ರಾಜಕೀಯ ಹೋರಾಟದ ಕಂಬ್ಯಾಕ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚುನಾವಣೆಯ ಕಾವು ಆರಂಭವಾಗುದಕ್ಕಿಂತ ಮುಂಚೆಯೇ ಅರುಣ ಘರ್ಜನೆ ಮೊಳಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ಬಿಜೆಪಿಯಲ್ಲೂ ತಲ್ಲಣ ಸೃಷ್ಟಿಸಿರುವುದು ಸುಳ್ಳಲ್ಲ.
ಪುತ್ತೂರು ಕ್ಷೇತ್ರದಲ್ಲಿ ಅಶೋಕ್ ರೈ ವಿರುದ್ಧ ಬಿಜೆಪಿಯು ಪ್ರಬಲ ಹೋರಾಟವನ್ನು ಸಂಘಟಿಸಲು ವಿಫಲವಾಗಿದ್ದು, ಕಳೆದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕ್ಷೇತ್ರಕ್ಕೆ ಕಾಲಿಡುತ್ತಿಲ್ಲ. ಮಾಜಿ ಶಾಸಕರು ಆಗಾಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರೂ ಅದಕ್ಕೆ ಪಕ್ಷದ ಪದಾಧಿಕಾರಿಗಳೇ ಸಾಥ್ ನೀಡುತ್ತಿಲ್ಲ. ಬಿಜೆಪಿ ಪಕ್ಷದ ಹಾಗೂ ಸಂಘಟನೆಯ ಕೆಲ ಪದಾಧಿಕಾರಿಗಳು ಅಶೋಕ್ ರೈ ಜೊತೆ ಚುನಾವಣೆ ಕಳೆದ ಮೇಲೂ ಸಹ ಮೈತ್ರಿ ರಾಜಕೀಯ ನಡೆಸುತ್ತಿರುವುದರ ಕುರಿತು ಮಾತುಗಳು ಕೇಳಿ ಬರುತ್ತಿದೆ.. ಹೆಚ್ಚಿನ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು ಈಗ ಪುತ್ತಿಲರ ಜೊತೆ ಹೆಜ್ಜೆ ಹಾಕಿದ್ದು, ಪಕ್ಷದ ನಿಷ್ಠಾವಂತ ಕೆಲ ನಾಯಕರು ಗಟ್ಟಿ ಸ್ವರಕ್ಕಾಗಿ ಪಕ್ಷಕ್ಕೆ ಮತ್ತೊಮ್ಮೆ ಪುತ್ತಿಲರ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.

