ಕಟೀಲು ಮೇಳದ ದೇವರು ಬ್ರಾಹ್ಮಣರನ್ನು ಬಿಟ್ಟು ಉಳಿದವರ ಮನೆಗಳಿಗೆ ಹೋಗುವುದಿಲ್ಲ ಹಾಗೂ ಕಟೀಲು ಮೇಳ ಕೋಮುವಾದವನ್ನು ಹರಡಿಸುತ್ತದೆ ಎಂಬ ನವೀನ್ ಸೂರಿಂಜೆ ಆರೋಪಗಳಿಗೆ ಹರಿನಾರಾಯಣ ದಾಸ ಅಸ್ರಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಟೀಲು ಮೇಳದ ದೇವರು ಬೇರೆ ಜಾತಿಯವರ ಮನೆಗೆ ಹೋಗುವುದಿಲ್ಲ ಎನ್ನುವ ಹೇಳಿಕೆಯೇ ತಪ್ಪು. ದೇವರನ್ನು ಯಾವ ಮನೆಗೆ ಕೊಂಡೊಯ್ಯಬೇಕು ಎಂಬುದು ಜಾತಿಯ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ. ಅದು ಸಸ್ಯಾಹಾರ, ಮಾಂಸಾಹಾರ, ಸಾತ್ವಿಕ ಆಚರಣೆ ಹಾಗೂ ಪೂಜೆಗೆ ಅಗತ್ಯವಾದ ಶುದ್ಧಾಚಾರದ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಸ್ಯಾಹಾರ ಪಾಲಿಸುವ ಬ್ರಾಹ್ಮಣೇತರರ ಮನೆಗಳಲ್ಲಿಯೂ ಕಟೀಲು ದೇವರನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ನಾರಾಯಣ ಗುರು ಮಂದಿರಗಳಲ್ಲಿಯೂ ಕಟೀಲು ದೇವರ ಪೆಟ್ಟಿಗೆಯನ್ನು ಇಟ್ಟು ಪೂಜೆ ನಡೆಯುತ್ತದೆ. ಮಾಂಸಾಹಾರ ಸೇವಿಸುವ ಮನೆಗಳಲ್ಲಿಯೂ ಪೂಜೆಯ ಸಂದರ್ಭದಲ್ಲಿ ಅಗತ್ಯವಾದ ಶುದ್ಧಾಚಾರ ಪಾಲಿಸಿ, ಪ್ರತ್ಯೇಕ ವ್ಯವಸ್ಥೆ ಮಾಡಿದ ಬಳಿಕ ದೇವರ ಪೂಜೆ ನಡೆಸುವ ಪದ್ಧತಿಯೂ ಇದೆ ಎಂದು ಅವರು ವಿವರಿಸಿದರು. ಬ್ರಾಹ್ಮಣರ ಮನೆಯಾದರೂ ಶುದ್ಧಾಚಾರ ಇಲ್ಲದಿದ್ದರೆ ಅಂತಹ ಮನೆಯಲ್ಲಿಯೂ ದೇವರನ್ನು ಇಟ್ಟು ಪೂಜೆ ಮಾಡುವುದಿಲ್ಲ. ಆದ್ದರಿಂದ ಇದು ಜಾತಿ ಆಧಾರಿತ ಪದ್ಧತಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಕಟೀಲು ಮೇಳದ ವಿರುದ್ಧ ಕೇಳಿಬಂದ ಕೋಮುವಾದದ ಆರೋಪವನ್ನೂ ತಳ್ಳಿಹಾಕಿದ ಅವರು, ಕಟೀಲು ಮೇಳದಲ್ಲಿ ಪೌರಾಣಿಕ ಕಥೆಗಳನ್ನಷ್ಟೇ ಪ್ರದರ್ಶಿಸಲಾಗುತ್ತದೆ. ಪೌರಾಣಿಕ ಕಥೆಗಳ ಮೂಲಕ ಕೋಮುವಾದವನ್ನು ಹರಡುವ ಪ್ರಶ್ನೆಯೇ ಇಲ್ಲ. ಅಲ್ಲದೆಕಟೀಲು ಮೇಳದಲ್ಲಿ ಸುಮಾರು 59% ಕಲಾವಿದರು ಹಿಂದುಳಿದ ವರ್ಗದಿಂದ ಬಂದವರು, ಬ್ರಾಹ್ಮಣನೇತರೇ ಹೆಚ್ಚಾಗಿ ಕಟೀಲು ಮೇಳದ ಕಲಾವಿದರಾಗಿದ್ದಾರೆ. ಕಟೀಲು ಮೇಳದ ಆಟವನ್ನು ಕೇವಲ ಹಿಂದೂ ಧರ್ಮದವರು ಮಾತ್ರ ಅಲ್ಲ ಕ್ರೈಸ್ತರೂ ಮುಸ್ಲಿಂ ಭಾಂದವರೂ ಆಡಿಸುತ್ತಾರೆ, ಎಷ್ಟೋ ಹತ್ತು ಸಮಸ್ತರ ಆಟದಲ್ಲಿ ಕ್ರೈಸ್ತ ಭಾಂಧವರು ಅಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಭಕ್ತರಿಗೆ ಗೊತ್ತಿದ್ದರೂ ಗೊತ್ತಿಲ್ಲದ ಭಕ್ತರಿಗೆ ಮಾದ್ಯಮದ ಮೂಲಕ ತಿಳಿಸುತ್ತಿದ್ದೇನೆ ಎಂದರು.

