ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಈ ವರ್ಷದ ವಿಷಯವನ್ನು ಉಲ್ಲೇಖಿಸಿದ ಅವರು, ವಯಸ್ಸು ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದರೂ, ಆರೋಗ್ಯ ಮತ್ತು ಸಾಮರ್ಥ್ಯ ಕುಗ್ಗುವುದು ಅನಿವಾರ್ಯವಲ್ಲ. ಯೋಗವು ಕೇವಲ ದೇಹವನ್ನು ಸದೃಢಗೊಳಿಸುವ ಸಾಧನವಲ್ಲ, ಆರೋಗ್ಯಕರ ಮತ್ತು ಚೈತನ್ಯಭರಿತ ವೃದ್ಧಾಪ್ಯಕ್ಕೆ ದಾರಿಯಾಗಿದೆ. 70ರ ವಯಸ್ಸಿನಲ್ಲಿ 50ರ ವಯಸ್ಸಿಗಿಂತ ಹೆಚ್ಚು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು.

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಇಂದು ಇಡೀ ದೇಶವು ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿರುವಂತೆ ಕಾಣುತ್ತಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಈಶಾನ್ಯ ಮತ್ತು ಬಂಗಾಳದಿಂದ ಪಶ್ಚಿಮದ ಸೌರಾಷ್ಟ್ರದವರೆಗೆ, ಇಡೀ ದೇಶವು ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು.

ಯೋಗ ಇಂದು ಭಾರತದ ಸಾಂಸ್ಕೃತಿಕ ಪರಂಪರೆ ಮಾತ್ರವಲ್ಲದೆ ಜಾಗತಿಕ ಸಾಮೂಹಿಕ ಚಳುವಳಿಯಾಗಿಯೂ ಮಾರ್ಪಟ್ಟಿದೆ ಎಂದು ಹೇಳಿದ ಪ್ರಧಾನಿ, ಜನರು ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಮತ್ತು ಆರೋಗ್ಯಕರ, ಸಮತೋಲಿತ ಮತ್ತು ಜಾಗೃತ ಸಮಾಜವನ್ನು ನಿರ್ಮಿಸುವಲ್ಲಿ ಯೋಗದ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

