ದೇವಾಲಯದೊಳಗೆ ದೇವರ ವಿಗ್ರಹದ ಚಿತ್ರ ತೆಗೆಯುತ್ತಾ ಬೇರೆಯವರಗ ದರ್ಶನಕ್ಕೆ ತೊಂದರೆ ಉಂಟುಮಾಡುವ ಪ್ರಕರಣಗಳು ಹೆಚ್ಚಾದ ಕಾರಣ, ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳ ಗರ್ಭಗುಡಿ ಹಾಗೂ ದೇವರ ವಿಗ್ರಹಗಳ ದೃಶ್ಯಗಳನ್ನು ಮೊಬೈಲ್ ಮೂಲಕ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಸೆಪ್ಟೆಂಬರ್ 1 ರ ಒಳಗಾಗಿ ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳ ಪ್ರವೇಶ ದ್ವಾರ ಅಥವಾ ಪಾದರಕ್ಷೆ ಇಡುವ ಜಾಗದ ಬಳಿ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿ ಇಡಲು ಪ್ರತ್ಯೇಕ ಕೌಂಟರ್‌ಗಳನ್ನು ನಿರ್ಮಿಸಲಾಗುವುದು. ಈ ವೇಳೆ ಭಕ್ತರು ತಮ್ಮ ಫೋನ್‌ಗಳನ್ನು ಇಲ್ಲಿ ಜಮಾವಣೆ ಮಾಡಲು ಪ್ರತಿ ಮೊಬೈಲ್‌ಗೆ ಕೇವಲ ₹5 ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು, ಫೋನ್ ಪಡೆದ ತಕ್ಷಣ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಮೂಲಕ ಭಕ್ತರಿಗೆ ಅಧಿಕೃತ ರಸೀದಿಯನ್ನು ನೀಡಲಾಗುತ್ತದೆ. ಅದರಂತೆ, ದರ್ಶನ ಮುಗಿದ ತರುವಾಯೂ ಈ ರಸೀದಿ ತೋರಿಸಿ ಫೋನ್ ಮರಳಿ ಪಡೆಯಬಹುದು.
ವಿಜಯ್ ಸರ್ಕಾರದ ಈ ನಿಯಮವು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಅದರಂತೆ, ಪ್ರಮುಖ ರಾಜಕಾರಣಿಗಳು, ಚಲನಚಿತ್ರ ನಟ-ನಟಿಯರು ಅಥವಾ ಪ್ರಭಾವಿ ವ್ಯಕ್ತಿಗಳು ದೇವಾಲಯಕ್ಕೆ ಭೇಟಿ ನೀಡಿದಾಗಲೂ ಅವರ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ.

