ಶರತ್ ಮಡಿವಾಳ ಕೊಲೆ ಗಲಾಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಿಂದೂ ಸಂಘಟನೆ ಮುಖಂಡ ಸಂದೀಪ್ ಪೂಜಾರಿ ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರೋದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಸಂಘಟನೆಯ ಬೆಂಬಲಿಗರು ಆ ಪೋಸ್ಟ್ಗೆ ಪ್ರತ್ಯುತ್ತರ ನೀಡುತ್ತಿದ್ದು ವೈಯುಕ್ತಿಕ ಲಾಭಕ್ಕಾಗಿ ಸಂಘಟನೆಗೆ ಬರಬೇಡಿ ಎಂದಿದ್ದಾರೆ.
ನಾನೊಬ್ಬ ಹಿಂದು ಕಾರ್ಯಕರ್ತನಾಗಿರುವುದಕ್ಕೆ ಹೆಮ್ಮೆ ಇದೆ ಎಂದ ಸಂಘಟನೆಯ ಮುಖಂಡ ಪ್ರದೀಪ್ ಸರಿಪಲ್ಲ.
ನಾನೊಬ್ಬ ಹಿಂದುಳಿದ ವರ್ಗದ ಬಿಲ್ಲವ ಸಮುದಾಯಕ್ಕೆ ಸೇರಿದ ಹಿಂದೂ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆಯಿದೆ. ನನ್ನ ಜಾತಿಯ ಬಗ್ಗೆ ಹೆಮ್ಮೆ ಇದೆ. ಯಾವತ್ತೂ ನಾನು ಜಾತಿಯ ಹೆಸರನ್ನು ಹೇಳಿಲ್ಲ ಆದರೆ ಇವತ್ತು ಅನಿವಾರ್ಯವಾಯಿತು. ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಂದವನಿಗೆ ಯಾವ ಫಲಾಪೇಕ್ಷೇಯು ಇರಬಾರದು. ಅದೇ ಸಿದ್ಧಾಂತದಡಿ ನಾವೆಲ್ಲರೂ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡವರು. ಸಂಘಟನೆಯಿಂದ ನನಗೇನು ಲಾಭ ಎಂದು ಬಂದವನಲ್ಲ, ನನ್ನಿಂದ ಸಂಘಟನೆಗೆ ಕಿಂಚಿತ್ತಾದರೂ ಲಾಭವಾಗಲಿ ಎಂದು ಬಂದವನು. ಸಂಘಟನೆಯಿಂದ ನನಗೆ ರಾಜಕೀಯ ಲಾಭವಾಗಲಿ ಎಂದು ಬಂದವನಲ್ಲ, ನಮ್ಮ ಸಂಘಟನೆಯಿಂದ ಒಂದು ರಾಜಕೀಯ ಪಕ್ಷಕ್ಕೆ ಶ್ರೇಯಸ್ಸು ಸಿಗುತ್ತದೆ ಎಂದರೆ ಅದಕ್ಕಿಂತ ಬೇರೆ ಖುಷಿ ಇಲ್ಲ ಎಂದು ಹಿಂದೂ ಸಂಘಟನೆಯ ಮುಖಂಡ ಪ್ರದೀಪ್ ಸರಿಪಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಶ್ರೇಯಸ್ಸು ಸಿಕ್ಕವರು ನಮ್ಮನ್ನು ಬಳಸಿಕೊಂಡಿಲ್ಲ, ಬದಲಾಗಿ ನಮ್ಮನ್ನು ಬೆಳೆಸಿದ್ದಾರೆ, ಕಷ್ಟ ಬಂದಾಗ ಬೆನ್ನಿಗೆ ನಿಂತಿದ್ದಾರೆ. ಆರ್ಥಿಕವಾಗಿ ನನ್ನದೂ ಅತ್ಯಂತ ಕೆಟ್ಟ ಕಾಲವಿದು, ಆದರೆ ಸಂಘಟನೆಯಾಗಲಿ ಸಂಘದ ಹಿರಿಯರಾಗಲಿ ಕಿರಿಯರಾಗಲಿ ನನ್ನ ಕೈ ಬಿಟ್ಟಿಲ್ಲ. ನನಗೆ ಕಷ್ಟ ಇದೆ ಎಂಬ ಕಾರಣಕ್ಕೆ ನನ್ನನ್ನು ಸಮಾಜಕ್ಕೆ ಪರಿಚಯಿಸಿದ ಸಂಘಟನೆಗೆ ನಾನು ಯಾವತ್ತೂ ಅಪಮಾನ ಮಾಡೋದಿಲ್ಲ. ಸಂಘಟನೆಯಲ್ಲಿ ದುಡಿದವನಿಗೆ ಕೇಸ್ ಕೋರ್ಟ್ ಹೊಸತೇನಲ್ಲ, ಕೇಸ್ ನನ್ನ ಮೇಲೂ ಇದೆ, ಆದರೆ ಯಾವತ್ತೂ ಯಾರ ಎಂಜಲು ಕಾಸಿಗೆ ಕೈಯೊಡ್ಡಿ ನನ್ನ ಮಾತೃ ಸಮಾನವಾದ ಸಂಘಟನೆಗೆ ಅಪಕೀರ್ತಿ ತರುವವನಲ್ಲ.
ಕರಾವಳಿ ಯಾವತ್ತಿಗೂ ಹಿಂದುತ್ವದ ಭದ್ರಕೋಟೆ, ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯೂ ಮತ್ತು ಭೌಗೋಳಿಕವಾಗಿಯೂ, ಹಿಂದುತ್ವವೇ ಈ ಮಣ್ಣಿನ ಉಸಿರು ಎಂದಿದ್ದಾರೆ.
ನಷ್ಟವನ್ನು ಅನುಭವಿಸಲು ಸಾಧ್ಯವಿದ್ದರೆ ಮಾತ್ರ ಸಂಘಟನೆಗೆ ಬರಬೇಕು – ಪುನೀತ್ ಅತ್ತಾವರ
ಸಂಘಟನಾ ಕೆಲಸ ಅಂದರೆ ಹಾಗೇನೇ ಅದರಲ್ಲಿ ಲಾಭ ಇದೆಯಾ… ಇಲ್ಲಾ ನಷ್ಟನೇ.. ನಷ್ಟವನ್ನು ಅನುಭವಿಸಲು ಸಾಧ್ಯವಿದ್ದರೆ ಮಾತ್ರ ಸಂಘಟನೆಗೆ ಬರಬೇಕು.. ಇಲ್ಲದಿದ್ದರೆ ಮನೆಯಲ್ಲಿ ಕೂರುವುದು ಒಳ್ಳೆಯದು ಎಂದು ಸಂಘಟನೆಯ ಮುಖಂಡ ಪುನೀತ್ ಅತ್ತಾವರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೇಸುಗಳು ನನ್ನ ಮೇಲೂ ಆಗಿದೆ. ಈಗಲೂ ಕೇಸುಗಳನ್ನು ಎದುರಿಸುತ್ತಲೇ ಇದ್ದೇನೆ ಎಂದ ಸುನಿಲ್ ಪಣಪಿಲ
ಕೇಸುಗಳು ನನ್ನ ಮೇಲೂ ಆಗಿದೆ. ಈಗಲೂ ಕೇಸುಗಳನ್ನು ಎದುರಿಸುತ್ತಲೇ ಇದ್ದೇನೆ. ಕಾಂಗ್ರೆಸ್ ಸಚಿವರ ಎದುರೇ ಕಾಲರ್ ಹಿಡಿಯುವಷ್ಟರ ಮಟ್ಟಿಗೆ ಹೋರಾಡಿದ್ದೆವು. ನೋವನ್ನೂ ಅನುಭವಿಸಿ ಆಗಿದೆ. ದೇವರಾಣೆಗೂ ಹೇಳ್ತೇನೆ, ನಾನು ಯಾರನ್ನೂ ನಂಬಿಕೊಂಡು ಮುಂದೆ ಹೋದವನಲ್ಲ. ಈಗಲೂ ನನ್ನ ಮೇಲೆ ಕೇಸಿದೆ. ಅವರಿವರು ನನ್ನನ್ನು ವಿಚಾರಿಸಿಲ್ಲ ಎಂಬ ಬೇಸರವೂ ಇಲ್ಲ. ಯಾಕೆಂದರೆ ನಾನು ಅವರನ್ನು ಕೇಳಿ ಕೆಲಸ ಮಾಡಿಲ್ಲ ಮತ್ತು ಅವರು ನನ್ನನ್ನು ಕೇಳಬೇಕೆಂದು ಅಪೇಕ್ಷೆ ಪಟ್ಟವನೂ ಅಲ್ಲ. ಅದರ ಹೊರತಾಗಿ ನನಗೆ ಬಹಳಷ್ಟು ನಾಯಕರು ಸಹಾಯ ಮಾಡಿದರು, ಬಹಳಷ್ಟು ನಾಯಕರು ವಿಚಾರಿಸಿದರು, ಬಹಳಷ್ಟು ಸ್ನೇಹಿತರು ನನ್ನೊಟ್ಟಿಗೆ ಹಗಲಿರುಳು ನಿಂತರು. ಅನೇಕ ವಕೀಲರು ನಯಾಪೈಸೆ ಸ್ವೀಕರಿಸದೆ ಕೋರ್ಟಲ್ಲಿ ವಾದ ಮಾಡಿದರು.
ತಲೆ ಗಟ್ಟಿ ಇದ್ದರೆ ಮಾತ್ರ ಬಂಡೆಗೆ ಡಿಚ್ಚಿ ಹೊಡೆಯಿರಿ. ನಂತರ ತಲೆ ಒಡೆದಾಗ ಯಾರ್ಯಾರಿಗೋ ದೂರು ಹಾಕಬೇಡಿ. ಸಂಘ ಕಾರ್ಯ, ಸಂಘಟನೆಗೆ ಎಂದು ಬಂದಾಗ ಯಾರನ್ನಾದರೂ ನಂಬಿ ಬಂದರೆ, ನೀವು ಯಾರನ್ನು ನಂಬಿ ಬಂದಿದ್ದೀರೋ ಅವರನ್ನೇ ನೇರವಾಗಿ ಕೇಳಿ. ಅದು ಬಿಟ್ಟು ಸಂಘಟನೆ, ಪಕ್ಷಕ್ಕೆ ದೂರು ಹಾಕುವುದು ಪುರುಷಾರ್ಥ ಅಲ್ಲ ಎಂದು ಬಿಜೆಪಿ ಕಾರ್ಯಕರ್ತ ಸುನಿಲ್ ಪಣಪಿಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

