ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ (Kambala) ಕ್ರೀಡೆ ಸೇರಿಸುವುದು ಸರಿಯಲ್ಲ’ ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಕರಾವಳಿಯ ಜಾನಪದ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸುವುದು ಇದರ ಮೂಲ ಆಶಯಕ್ಕೆ ಧಕ್ಕೆ ತರಬಹುದು ಮತ್ತು ಸಾಂಸ್ಕೃತಿಕ ಗೊಂದಲಕ್ಕೆ ಕಾರಣವಾಗಬಹುದು ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
ಕಂಬಳವು ಕರಾವಳಿ ಕರ್ನಾಟಕದ ಮಣ್ಣಿನ ಆಚರಣೆಯಾಗಿದ್ದು, ಅದನ್ನು ಸ್ಥಳೀಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಯಿಂದ ಬೇರ್ಪಡಿಸಿ ವಾಣಿಜ್ಯೀಕರಣ ಮಾಡುವುದು ಸೂಕ್ತವಲ್ಲ ಎಂದು ಯದುವೀರ್ ತಿಳಿಸಿದ್ದಾರೆ

ಮಳೆಯಿಲ್ಲದೇ ಜನ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ, ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಹೊಸ ಆಕರ್ಷಣೆಗಳನ್ನು ಸೇರಿಸುವ ಬದಲು, ಸರ್ಕಾರ ಮತ್ತು ದಸರಾ ಉನ್ನತ ಸಮಿತಿಯು ದಸರಾ ಹಬ್ಬದ ಮೂಲ ಅಸ್ಮಿತೆಯನ್ನು ಬಲಪಡಿಸುವುದು ಹಾಗೂ ಮೂಲಸೌಕರ್ಯ ಕೊರತೆಗಳಂತಹ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಕೂಟವನ್ನು ಆಯೋಜಿಸಲು ಅಧಿಕಾರಿಗಳು ಮತ್ತು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತುಳುನಾಡಿನಲ್ಲಿ ಮಾತ್ರವಲ್ಲದೇ, ಮೈಸೂರಿನಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಪ್ರಸ್ತಾವಿತ ಕಾರ್ಯಕ್ರಮವನ್ನು ತಡೆಯಲು ವಿವಿಧ ರೈತ ಸಂಘಟನೆಗಳು, ಪರಿಸರವಾದಿಗಳು ಮತ್ತು ಪರಂಪರೆ ತಜ್ಞರು ಒಟ್ಟಾಗಿ ಹೊಸ ಕ್ರಿಯಾ ಸಮಿತಿಯೊಂದನ್ನು ರಚಿಸಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ.

