ರಾಮ ಮಂದಿರ ದೇಣಿಗೆ (Ayodhya Ram Mandir) ಕದ್ದವರ ಪರ ವಕೀಲರು ವಕಾಲತ್ತು ವಹಿಸುವುದಿಲ್ಲ ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಘೋಷಿಸಿದೆ. ಅಲ್ಲದೇ ಯಾರಾದರೂ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಿದರೆ ಅವರಿಗೆ 5 ಲಕ್ಷ ರೂ. ದಂಡ ವಿಧಿಸುವುದಾಗಿ ಅಯೋಧ್ಯೆ ಬಾರ್ ಅಸೋಸಿಯೇಷನ್ ಖಡಕ್ ಎಚ್ಚರಿಕೆ ನೀಡಿದೆ.
ಅಯೋಧ್ಯೆ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಾಳಿಕಾ ಪ್ರಸಾದ್ ಮಿಶ್ರಾ ಅವರ ನೇತೃತ್ವದಲ್ಲಿ ನಡೆದ ಫೈಜಾಬಾದ್ ವಕೀಲರ ಸಂಘದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಪ್ರಕರಣದ ಆರೋಪಿಗಳ ಪರವಾಗಿ ಯಾವ ವಕೀಲರು ವಕಾಲತ್ತು ವಹಿಸುವುದಿಲ್ಲ. ಯಾರಾದರೂ ವಕಾಲತ್ತು ವಹಿಸಿದರೆ ಅವರಿಗೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಕಾಳಿಕಾ ಪ್ರಸಾದ್ ಘೋಷಿಸಿದ್ದಾರೆ
ಕೆಲವರ ಈ ಕೃತ್ಯದಿಂದ, ಇಡೀ ಅಯೋಧ್ಯೆ ನಿವಾಸಿಗಳಿಗೆ ಕೆಟ್ಟ ಹೆಸರು ಬಂದಿದೆ. ಬುಲ್ಲೋಜರ್ ನೀತಿಯನ್ನು ಅನುಸರಿಸುವ ಮೂಲಕ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹಿರಿಯ ವಕೀಲ ರಾಜೇಂದ್ರ ಚೌಧರಿ ಒತ್ತಾಯಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಂಟು ಆರೋಪಿಗಳ ನಿವಾಸಗಳ ಮೇಲೆ ಪೊಲೀಸರು ಭಾನುವಾರ ಏಕಕಾಲಕ್ಕೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಇಂದು) ನಿರಾಕರಿಸಿದೆ.

