ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಬಂಡಾಯ ತೀವ್ರಗೊಂಡಿದ್ದು, ಉಲುಬೇರಿಯಾ ಪುರ್ಬಾ ಶಾಸಕ ರಿತಬ್ರತ ಬ್ಯಾನರ್ಜಿ ಅವರು ತಮ್ಮದೇ “ನಿಜವಾದ ತೃಣಮೂಲ ಕಾಂಗ್ರೆಸ್” ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕಿ ಮಮತಾ ಬ್ಯಾನರ್ಜಿಯನ್ನೇ ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ರಿತಬ್ರತ ಬ್ಯಾನರ್ಜಿ ನೇತೃತ್ವದ ಅತೃಪ್ತ ಬಣವು ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸೋಮವಾರ ಘೋಷಿಸಿದೆ. ಕೋಲ್ಕತ್ತಾದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಫಿರ್ಹಾದ್ ಹಕೀಮ್ ಸೇರಿದಂತೆ ಹಲವು ನಾಯಕರನ್ನೊಳಗೊಂಡ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನೂ ಪ್ರಕಟಿಸಲಾಗಿದೆ. ಈ ಸಭೆಯಲ್ಲಿ ಟಿಎಂಸಿಯ 60 ಶಾಸಕರು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ (KMC) 70 ಕೌನ್ಸಿಲರ್ಗಳು ಭಾಗವಹಿಸಿದ್ದರು.
ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಪುನರ್ ರಚಿಸಬೇಕು. ಆದರೆ, 2022ರ ಫೆಬ್ರವರಿ ಬಳಿಕ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ. ಹಳೆಯ ಸಮಿತಿಯ ಅವಧಿ ಮುಗಿದಿದ್ದರಿಂದ ಪಕ್ಷದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಹೀಗಾಗಿ ನಾವು ನೂತನ ನಾಯಕತ್ವವನ್ನು ಆಯ್ಕೆ ಮಾಡಿದ್ದೇವೆ ಎಂದು ರಿತಬ್ರತ ಬ್ಯಾನರ್ಜಿಘೋಷಿಸಿದ್ದಾರೆ
ಕಳೆದ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡಿತ್ತು. ಅಲ್ಲಿಂದ ಬಳಿಕ ಪಕ್ಷದೊಳಗೆ ಒಂದಲ್ಲ ಒಂದು ರೀತಿಯ ತಿಕ್ಕಾಟ ನಡೆಯುತ್ತಿದ್ದು ಇದೀಗ ನೂತನ ಅಧ್ಯಕ್ಷರ ನೇಮಕದೊಂದಿಗೆ ಬಂಡಾಯದ ಕಿಚ್ಚು ಮತ್ತೊಂದು ಹಂತ ತಲುಪಿದೆ. ಕೆಲ ದಿನಗಳ ಹಿಂದಷ್ಟೇ 20 ಸಂಸದರ ಬಣ NCPI ಪಕ್ಷದಲ್ಲಿ ವಿಲೀನಗೊಂಡಿರುವುದಾಗಿ ಘೋಷಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

