‘ಟಗರು’ನಲ್ಲಿ ಸರೋಜಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತ್ರಿವೇಣಿ ರಾವ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತ್ರಿವೇಣಿ ರಾವ್, ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಅವರೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ. ದೆಹಲಿ ನಗರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಜೂನ್ 24 ರಂದು ಅಗರ್ತಲಾದ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿಯ ಹಿರಿಯ ನಾಯಕರು, ಸಚಿವರು ಮತ್ತು ಬಾಲಿವುಡ್‌ನ ಹಲವು ತಾರೆಯರು ಬಂದು ನವ ಜೋಡಿಗೆ ಶುಭ ಕೋರಲಿದ್ದಾರೆ.
ತ್ರಿವೇಣಿ ರಾವ್, ಸೂರಿ ನಿರ್ದೇಶನದ, ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅಭಿನಯದ ಟಗರು ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದರು. ಕಾನ್ಸ್‌ಟೇಬಲ್ ಸರೋಜಾ ಎಂಬ ಕ್ಯಾರೆಕ್ಟರ್ ಮಾಡಿದ್ದ ತ್ರಿವೇಣಿ ರಾವ್ ಜನಮನ ಗೆದ್ದಿದ್ದರು. ತಾಯಿಗೆ ತಕ್ಕ ಮಗ, ರಾಜ ಮಾರ್ತಾಂಡ, ಸಲಗ, ಯುವರತ್ನ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ತ್ರಿವೇಣಿ ರಾವ್, ಬಳಿಕ ತೆಲುಗಿನಲ್ಲೂ ಕೆಲವು ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ತಮ್ಮ ಹೆಸರನ್ನು ರುಷಿಕಾ ರಾಜ್ ಎಂದು ಬದಲಾಯಿಸಿಕೊಂಡರು.
ರಾಜಕೀಯದಲ್ಲಿ ಮುಖ್ಯಮಂತ್ರಿಯ ಗದ್ದುಗೆ ಏರುವ ಮೊದಲು ಬಿಪ್ಲಬ್ ದೇವ್ ದೆಹಲಿಯಲ್ಲಿ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ತ್ರಿಪುರಾ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 2018ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಚಾಕ್ಯಚಕ್ಯತೆ ಮತ್ತು ರಣತಂತ್ರದಿಂದ ಎಡಪಕ್ಷಗಳಿಗೆ ಮಣ್ಣು ಮುಕ್ಕಿಸಿದ್ದ ಬಿಪ್ಲಬ್ ದೇವ್ ಮುಖ್ಯಮಂತ್ರಿಯಾಗಿ ಅಧಿಕಾರ ಕೂಡ ವಹಿಸಿಕೊಂಡರು. ಈ ಹಿಂದೆ ಬಿಪ್ಲಬ್ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನೀತಿ ದೇವ್ ಜೊತೆ ಮದುವೆಯಾಗಿದ್ದರು. 20 ವರ್ಷಗಳ ಕಾಲ ಜೊತೆಯಾಗಿ ಬದುಕಿದ ಇಬ್ಬರ ದಾಂಪತ್ಯ ಜೀವನ ಕೆಲ ವರ್ಷದ ಹಿಂದೆ ಅಂತ್ಯವಾಗಿತ್ತು. 54 ವರ್ಷದ ಬಿಪ್ಲಬ್ ಕುಮಾರ್ ದೇವ್ ಅವರು ಪ್ರಸ್ತುತ ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.

