ಸಂಪಿಗೆಹಳ್ಳಿಯಲ್ಲಿ ನಡೆದಿದ್ದ ವೃದ್ಧ ದಂಪತಿಗಳ ನಿಗೂಢ ಸಾವು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಆರಂಭದಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂದು ಪತ್ನಿಯನ್ನು ಕೊಂದು 85ರ ವೃದ್ಧ ಆತ್ಮಹತ್ಯೆ ಎಂದು ಸದ್ದು ಮಾಡಿದ್ದ ಸುದ್ದಿಯ ಅಸಲಿ ಸತ್ಯವು ಈಗ ಎಲ್ಲರನ್ನು ಭಾವುಕರನ್ನಾಗಿಸಿದೆ.
ಪತ್ನಿ ಸುಮಿತ್ರಾ ಪ್ರಸಾದ್(77) ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಆಕೆಯ ಸಾವನ್ನು ತಡೆಯಲಾರದೇ ನೊಂದ ಪತಿ ಶಿವಾನಂದಂ ಪ್ರಸಾದ್(83) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸಂಪಿಗೆಹಳ್ಳಿಯ ನಿವಾಸದಲ್ಲಿ ಸುಮಿತ್ರಾ ಪ್ರಸಾದ್ ಹಾಗೂ ಶಿವಾನಂದಂ ಪ್ರಸಾದ್ ಅವರ ಶವಗಳು ಪತ್ತೆಯಾಗಿದ್ದವು. ನಿನ್ನೆ ಈ ದಂಪತಿಗಳ ಪುತ್ರ, ತಂದೆಯೇ ತಾಯಿಯನ್ನು ಕೊಲೆ ಮಾಡಿ ತದನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಶವಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ಹಲ್ಲೆಯ ಕುರುಹುಗಳಿರಲಿಲ್ಲ. ಅವರಿಗೆ ತೀವ್ರ ಹೃದಯಾಘಾತ ಆಗಿದ್ದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪತ್ನಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು ಕಂಡು ವೃದ್ಧ ಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪತ್ನಿಯ ಅಗಲಿಕೆಯನ್ನು ಸಹಿಸಲಾರದೇ ತನಗಿನ್ನು ಯಾರು ದಿಕ್ಕು ಎಂಬ ಮನನೊಂದ ಭಾವನೆಯಲ್ಲಿ ಅವರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಪತ್ನಿ ಸುಮಿತ್ರಾ ಪ್ರಸಾದ್ ಅವರು ಅಂಧ ಹಾಗೂ ಕಿವುಡರಾಗಿದ್ದರು ಆಕೆಯ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ಶಿವಾನಂದಂ ಆಕೆ ಇರದ ಭೂಮಿಯಲ್ಲಿ ತಾನೂ ಇಲ್ಲದಿರಲು ನಿರ್ಧರಿಸಿ ಈ ಕಠಿಣ ನಿರ್ಧಾರ ಕೈಗೊಂಡಿದ್ದರು.

