ಪುತ್ತೂರು: ನರಿಮೊಗರು – ಶಾಂತಿಗೋಡು ಮುಖ್ಯ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಕಳೆದ 2 ವಾರದಿಂದ ನಿರಂತರ ಫಾಲೋಅಪ್ ಮಾಡಿದ್ದು, ಬಗ್ಗದ ಆಡಳಿತ ವ್ಯವಸ್ಥೆಯನ್ನು ಬಗ್ಗಿಸುವ ನಿಟ್ಟಿನಲ್ಲಿ ಇಂದು ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಅಧಿಕಾರಿಗಳು ರಸ್ತೆ ದುರಸ್ತಿಯ ಭರವಸೆ ನೀಡಿದ್ದರು. ಈ ಹೋರಾಟ ಪುತ್ತಿಲರಿಗೆ ರಾಜಕೀಯವಾಗಿ ದೊಡ್ಡ ಮೈಲೇಜ್ ನೀಡಿತ್ತು. ಪುತ್ತಿಲರ ಸರಣಿ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪುತ್ತೂರಿನ ಶಾಸಕರು ಕ್ಷೇತ್ರಾದ್ಯಂತ ಇರುವ ಗುಂಡಿ ಬಿದ್ದಿರುವ ರಸ್ತೆಯ ಮಾಹಿತಿ ಪಡೆದುಕೊಂಡು, ದುರಸ್ತಿ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮ್ಮ ಕ್ಷೇತ್ರದ ಗ್ರಾ.ಪಂ ವ್ಯಾಪ್ತಿಯ ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿ ನಡೆಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ

ಕ್ಷೇತ್ರದ ಹೆಚ್ಚಿನ ರಸ್ತೆಗಳು ಹೊಂಡ ಬಿದ್ದಿದೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ಚರಂಡಿ ಇಲ್ಲದ ಕಾರಣ ಮಳೆ ನೀರಿಗೆ ರಸ್ತೆಗಳ ಟಾರು ಎದ್ದು ಹೋಗಿದೆ. ಗುಣಮಟ್ಟದ ಕಾಮಗಾರಿಯ ಕೊರತೆಯಿಂದ ಕಳೆದ ವರ್ಷ ಪೂರ್ಣಗೊಂಡ ಪುತ್ತೂರು – ಉಪ್ಪಿನಂಗಡಿಯ ಡಾಂಬರೂ ರಸ್ತೆಯೂ ಪ್ಯಾಚ್ ವರ್ಕ್ನಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಶಾಸಕರು ಎಚ್ಚೆತ್ತುಕೊಂಡಿದ್ದು, ವರದಿ ತರಿಸಿಕೊಂಡು ಹೊಂಡಗಳನ್ನು ಮುಚ್ಚುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಕಚೇರಿಗೆ ಸುಮಾರು 73 ಮಂದಿ ವಿವಿಧ ಸಾರ್ವಜನಿಕರು ರಸ್ತೆ ದುರಸ್ಥಿಗೆ ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೂಡಲೇ ದುರಸ್ಥಿ ಕಾರ್ಯ ನಡೆಸುವಂತೆ ಜಿಪಂ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಮಳೆಗಾಲ ಮುಗಿದ ಬಳಿಕ ರಸ್ತೆಗಳ ಡಾಮರೀಕರಣ ಕೆಲ ನಡೆಯಲಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯ ರಸ್ತೆಗಳ ದುರಸ್ಥಿ ನಡೆಯಲಿದೆ. ಅನುದಾನದ ಕೊರತೆ ಇದ್ದಲ್ಲಿ ತಿಳಿಸುವಂತೆಯೂ ನಿರ್ದೇಶನ ನೀಡಲಾಗಿದೆ. ತನ್ನ ಕ್ಷೇತ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಾನು ವ್ಯವಸ್ಥೆ ಮಾಡುತ್ತೇನೆ.
– ಅಶೋಕ್ ರೈ, ಶಾಸಕರು, ಪುತ್ತೂರು

