ಬಂಟ್ವಾಳ : ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರನ್ನು ಮಚ್ಚಿನಿಂದ ಹತ್ಯೆಗೈದು ಪರಾರಿಯಾಗಿದ್ದ ಬೆಳ್ತಂಗಡಿ ತಾಲೂಕಿನ ನಿವಾಸಿ ಚೇತನ್ನನ್ನು ಬಂಟ್ವಾಳ ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬ೦ದಿದೆ.
ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಹಾಗೂ ಪೊಲೀಸರು ಯಾವ ಸ್ಥಳದಲ್ಲಿ ಆರೋಪಿಯನ್ನು ವಶಕ್ಕೆ ಪಡೆದರು ಎಂಬ ಸಂಪೂರ್ಣ ವಿವರವನ್ನು ಇನ್ನಷ್ಟೇ ಪ್ರಕಟಿಸುವ ನಿರೀಕ್ಷೆಯಿದೆ.

FIR ನಲ್ಲಿ ಏನಿತ್ತು ?:
ಘಟನೆ ಸಂಬಂಧ ಲಾವಣ್ಯಾ ಅವರ ಸಹೋದರಿಯ ಪತಿ ಗೌತಮ್ ಎಂಬವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಉಳಿ ಗ್ರಾಮದ ಕಕ್ಯ ಪದವು ನಿವಾಸಿಯಾಗಿರುವ ಗೌತಮ್ ಅವರ ಪತ್ನಿ ಹಾಗೂ ಪತ್ನಿಯ ತಂಗಿ ಲಾವಣ್ಯ ಕಲ್ಲಡ್ಕ ಪುಷ್ಪರಾಜ್ ನರ್ಸಿಂಗ್ ಹೋಮ್ ನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು. ಲಾವಣ್ಯರಿಗೆ ಗುರುವಾರ (ಜು.17) ಹಗಲು ಪಾಳಿ ಕೆಲಸವಿದ್ದು, ಲಾವಣ್ಯ ಅವರ ಅಕ್ಕ ಚೈತ್ರಾರಿಗೆ ರಾತ್ರಿ ಪಾಳಿ ಕರ್ತವ್ಯ ಇತ್ತು. ಗುರುವಾರ ಸಂಜೆ ಸುಮಾರು 5:45 ಗಂಟೆಗೆ ಚೈತ್ರಾ ಅವರು ಪತಿಯ ಮೊಬೈಲ್ ಗೆ ಕರೆ ಮಾಡಿ, “ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದು, ಆಕೆಗೆ ಚೇತನ್ ಎಂಬಾತನು ಕಿರುಕುಳ ನೀಡುತ್ತಿದ್ದಾನೆ ನೀವು ಲಾವಣ್ಯಳ ಮೊಬೈಲ್ ಗೆ ಕರೆ ಮಾಡಿ” ಎಂದು ತಿಳಿಸಿದ್ದಾರೆ. ಅದರಂತೆ ಗೌತಮ್ ಕರೆ ಮಾಡಿದಾಗ ಲಾವಣ್ಯ ಕರೆಯನ್ನು ಸ್ವೀಕರಿಸಿ, “ಚೇತನ್ ಎಂಬಾತನು ಕಿರುಕುಳ ನೀಡಿದ್ದು ಸತ್ಯ” ಎಂದು ಹೇಳುವಷ್ಠರಲ್ಲಿ ಆಕೆ ಜೋರಾಗಿ ಕಿರುಚುವುದು ಕೇಳಿ ಬಂದಿದೆ. ಗೌತಮ್ ಅವರು ಕೂಡಲೇ ಬಿ.ಸಿ.ರೋಡ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಅಜಯ್ ಎಂಬವರಿಗೆ ಕರೆ ಮಾಡಿ ‘ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಎಂಬಾತನು ನನ್ನ ಪತ್ನಿಯ ತಂಗಿ ಲಾವಣ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ. ನೀನು ಕೂಡಲೇ ಅಲ್ಲಿಗೆ ಹೋಗು’ ಎಂದು ತಿಳಿಸಿದ್ದಾರೆ.
ಅಲ್ಲಿಗೆ ಹೋಗುತ್ತೇನೆಂದು ಹೇಳಿ ಅಜಯ್ ಕಾಲ್ ಕಟ್ ಮಾಡಿದ್ದಾರೆ. ಸುಮಾರು 10 ನಿಮಿಷದ ನಂತರ ಗೌತಮ್ ಅವರಿಗೆ ಕರೆ ಮಾಡಿದ ಅಜಯ್, “ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಕೊಲೆಯಾಗಿದೆ. ನೀನು ಕೂಡಲೇ ಬಾ” ಎಂದು ಹೇಳಿದ್ದು, ಈ ಹಿನ್ನೆಲೆ ಗೌತಮ್ ಅವರು ಬೆಳ್ತಂಗಡಿ ಸರಳಿ ಕಟ್ಟೆಯಿಂದ ಊರವರಾದ ಸುರೇಶ್, ವಸಂತ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವಾಗ ಲಾವಣ್ಯರ ಮೃತ ದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು, ನೇರವಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದು ಲಾವಣ್ಯರ ಮೃತದೇಹವನ್ನು ನೋಡಿದ್ದಾರೆ. ಲಾವಣ್ಯ ಅವರ ತಲೆ ಹಿಂಬದಿ ಆಳವಾದ ಗಾಯವಾಗಿರುವುದನ್ನು ಅವರು ನೋಡಿದ್ದಾರೆ. ಘಟನಾ ಸ್ಥಳದಲ್ಲಿ ಬ್ಯಾಗ್, ರಕ್ತದ ಕಲೆ ಹಾಗೂ ಲಾವಣ್ಯರನ್ನು ಕಡಿದು ಕೊಲೆ ಮಾಡಲು ಉಪಯೋಗಿಸಿದ ತಲವಾರು ಬಿದ್ದಿರುವುದನ್ನು ಘಟನಾ ಸ್ಥಳಕ್ಕೆ ಹೋಗಿದ್ದ ಅಜಯ್ ಅವರು ಗೌತಮ್ ಅವರಿಗೆ ತಿಳಿಸಿದ್ದಾರೆ.

