ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕಳೆದ ಕೆಲದಿನಗಳಿಂದ ವಿದ್ಯುತ್ ಸರಿಯಾಗಿ ಪೂರೈಕೆ ಆಗದೆ ಜನ ಸಾಮಾನ್ಯರು ಪರದಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅರುಣ್ ಕುಮಾರ್ ಪುತ್ತಿಲರು ಮೆಸ್ಕಾಂ ಇಲಾಖೆಯ ಶಾಖಾಧಿಕಾರಿ ಓ&ಎಮ್1 ಹಾಗೂ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್‌ನ ಭೇಟಿ ಮಾಡಿ, ಸಮಸ್ಯೆಗಳ ಕುರಿತು ಚರ್ಚಿಸಿ, ಮನವಿ ಪತ್ರ ನೀಡಿದರು.

ಕಳೆದೆರಡು ದಿನಗಳಲ್ಲಿ ಕೆಲವು ಕಡೆಗಳಲ್ಲಿ ಲೋ-ವೋಲ್ವೇಜ್ ಸಮಸ್ಯೆ ಹಾಗೂ ಕೆಲವು ಕಡೆಗಳಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲದೆ ಜನ ಸಾಮಾನ್ಯರು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೂ ಇದರಿಂದ ಸಮಸ್ಯೆಯಾಗುತ್ತಿದ್ದು, ಜನ ಸಾಮಾನ್ಯರ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಮೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸರಿಯಾದ ಪ್ರತಿಕ್ರಿಯೆ ಕೂಡ ಇಲಾಖೆಯ ಕಡೆಯಿಂದ ಬರುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳು ವ್ಯಾಪಕವಾಗಿದೆ.
ಆದಷ್ಟು ಬೇಗ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕು. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಜಾಸ್ತಿ ಆಗುವ ಸಂಭವವಿದ್ದು, ಇಲಾಖೆಯ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಕ್ಕೆ ಒತ್ತಡ ಹೇರಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಬೇಕು ಹಾಗೂ ಗ್ರಾಹಕರಿಗೆ ಎರಡಕ್ಕಿಂತ ಹೆಚ್ಚು ಸಹಾಯವಾಣಿ ಸಂಪರ್ಕ ಸಂಖ್ಯೆಯ ಮೂಲಕ ಜನರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸವಂತಾಗಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಪರಿಹರಿಸದೇ ಇದ್ದಲ್ಲಿ ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲೈನ್‌ಮ್ಯಾನ್‌ಗಳ ಕೊರತೆಯ ವಿರುದ್ಧ ಪುತ್ತೂರಿನ ಜನರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದ ಮೂಲಕ ಎಚ್ಚರಿಕೆಯನ್ನು ಪುತ್ತಿಲ ಪರಿವಾರ ನೀಡಿತು.
ಸಂದರ್ಭದಲ್ಲಿ ಟ್ರಸ್ಟ್‌ನ ಸಂಚಾಲಕರಾದ ಅರುಣ್ಯಾ ಕುಮಾರ್ ಪುತ್ತಿಲ, ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ಹಾಗೂ ಕೋಶಾಧಿಕಾರಿ ರೂಪೇಶ್ ನಾಯಕ್ ಉಪಸ್ಥಿತರಿದ್ದರು.

