ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣಕ್ಕಾಗಿ ಗೃಹ ಜ್ಯೋತಿ (Gruha Jyothi Scheme) ಯೋಜನೆಯನ್ನು ಮರುಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇಂಧನ ಇಲಾಖೆಯ ಸಿಬ್ಬಂದಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಹೊಸ ಅರ್ಜಿಗಳನ್ನು ವಿತರಿಸಲಿದ್ದಾರೆ. ಅರ್ಜಿಯಲ್ಲಿ ನಮೂದಿಸಿದ ವಿವರಗಳು, ಫೋಟೋ ಹಾಗೂ ಫಲಾನುಭವಿಯ ಮಾಹಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ ದೃಢೀಕರಿಸಲಾಗುತ್ತದೆ.
ಜುಲೈ 1 ರಿಂದ ಪ್ರಕ್ರಿಯೆ ಶುರು
ಫಲಾನುಭವಿಗಳ ಮನೆ – ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದು, ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ. ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯ ಲಾಭಪಡೆಯಬಹುದು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ. ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ
