ಅಯೋಧ್ಯೆಯ ಟ್ರಸ್ಟ್ಗೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಅಥವಾ ಕಳ್ಳತನವಾಗಿದೆ ಎಂಬ ಗಂಭೀರ ಆರೋಪಗಳು ಇತ್ತೀಚೆಗೆ ಎದ್ದಿವೆ. ಮುಖ್ಯವಾಗಿ 7 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಿಶ್ವಹಿಂದೂ ಪರಿಷದ್ನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಎಕ್ಸ್ ಪೋಸ್ಟ್ ಮಾಡಿದ್ದು, ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.
https://x.com/VHPDigital/status/2069774332524625946
ಅಯೋಧ್ಯೆ ರಾಮಮಂದಿರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಬೇಕು, ತನಿಖೆಯನ್ನು ತ್ವರಿತಗೊಳಿಸಬೇಕು, ತ್ವರಿತ ನ್ಯಾಯಾಲಯವು ಪ್ರಕರಣವನ್ನು ದಿನನಿತ್ಯದ ಆಧಾರದ ಮೇಲೆ ಕೈಗೆತ್ತಿಕೊಳ್ಳಬೇಕು ಮತ್ತು ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಮ ಮಂದಿರ ದೇಣಿಗೆ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಈಗಾಗಲೇ ಉತ್ತರ ಪ್ರದೇಶ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ 3 ಸದಸ್ಯರ ತನಿಖಾ ತಂಡವು 150 ಪುಟಗಳ ವರದಿಯನ್ನು ಸಲ್ಲಿಸಿದ್ದು, ಅಂತಿಮ ವರದಿಯನ್ನು ಇನ್ನೊಂದು ವಾರದಲ್ಲಿ ನೀಡಲಿದೆ ಎನ್ನಲಾಗಿದೆ. ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಹೇಳಿಕೆಗಳನ್ನು ನೀಡದಂತೆ ಯಪಿ ಸಿಎಂ ಜನರನ್ನು ಮನವಿ ಮಾಡಿದ್ದು, ಆರೋಪಿ ಯಾರೇ ಆಗಿರಲಿ, ಅವರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ ಎಂದಿದ್ದಾರೆ.

