ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕರಾದ ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಚಾವಡಿ ಸಮ್ಮಾನವನ್ನು ಮಾಡಿ ಗೌರವಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾಗಿರುವ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಕುಂಬ್ರ ದುರ್ಗಾಪ್ರಸಾದ್ ರೈ ಅವರನ್ನು ಸನ್ಮಾನಿಸಿ ಮಾತನಾಡಿ, ದುರ್ಗಾಪ್ರಸಾದ್ ರೈಯವರು ಬಹುಮುಖ ಪ್ರತಿಭೆ ಉಳ್ಳವರು, ಸಂಘಟನಾ ಚತುರತೆಯನ್ನು ಹೊಂದಿದವರು, ನ್ಯಾಯವಾದಿಯಾಗಿ ತುಳು ಅಕಾಡೆಮಿ ಸದಸ್ಯರಾಗಿ ಹೆಸರನ್ನು ಪಡೆದಿದ್ದಾರೆ. ಇವರು ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕರಾಗಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಇವರ ಸಂಘಟನಾ ಶಕ್ತಿ ನಮಗೆ ಇನ್ನೂ ಬೇಕು. ಇವರು ಮುಂದೆಯೂ ನಮ್ಮ ಜೊತೆ ಕೆಲಸವನ್ನು ಮಾಡುತ್ತಾರೆ. ಇವರ ಉತ್ತಮ ಕೆಲಸಕ್ಕೆ ನಾವೆಲ್ಲರೂ ಅಭಾರಿಯಾಗಿದ್ದೇವೆ ಎಂದು ಹೇಳಿದರು.

