‘ಭತ್ತದ ತಳಿಯ ಕಾವಲುಗಾರ’ ಈ ಪುಸ್ತಕ ಮರೆತು ಹೋಗುತ್ತಿರುವ ಅನ್ನ ದಾರಿಯ ಹಾದಿಯನ್ನು ಮತ್ತೆ ನಮ್ಮ ಕೈಗೆ ಒಪ್ಪಿಸುವ ಪ್ರಯತ್ನ. ಅನ್ನವನ್ನು ಕೇವಲ ಆಹಾರವಾಗಿ ಅಲ್ಲ, ಒಂದು ಜೀವ ಸಂಸ್ಕೃತಿಯಾಗಿ ನೋಡುವ ದೃಷ್ಟಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ. ಭತ್ತ ಎನ್ನುವುದು ಕೇವಲ ಒಂದು ಬೆಳೆ ಅಲ್ಲ, ಅದು ನೆಲದ ಉಸಿರು. ಮಣ್ಣಿನ ನೆನಪು. ಮಳೆ, ಬೆವರು, ಹಸಿವು,ಸೂರ್ಯ, ತಾಳ್ಮೆ, ನಿರೀಕ್ಷೆ, ಪೂರ್ವ ಪರಂಪರೆ ಇವೆಲ್ಲವೂ ಸೇರಿ ರೂಪುಗೊಳ್ಳುವ ಒಂದು ಸಂಸ್ಕೃತಿಯ ಸಂಕೇತ. ಸಾವಿರಾರು ವರ್ಷಗಳ ಕಾಲ ರೈತರು ತಮ್ಮ ಅನುಭವದಿಂದ ಕಾಪಾಡಿಕೊಂಡು ಬಂದ ತಳಿ ವೈವಿಧ್ಯ ಇಂದು ನಿಧಾನವಾಗಿ ನಮ್ಮ ಕೈಗಳಿಂದ ಜಾರಿ ಹೋಗುತ್ತಿದೆ. ಸುಲಭದ ದಾರಿಯ ಹುಡುಕಾಟದಲ್ಲಿ, ಅಧಿಕ ಇಳುವರಿಯ ಮರುಳು ಜಾಲದಲ್ಲಿ, ನಾವು ನಮ್ಮದೇ ಮೂಲಬಲವನ್ನು ಮರೆತಿದ್ದೇವೆ. ಈ ಮರೆವಿನ ಮಧ್ಯೆ, ಒಂದು ಪುಟ್ಟ ಗುಡ್ಡೆಯ ತಟ್ಟಿನ ಮೇಲಿಂದ, ಹತ್ತಿಪ್ಪತ್ತು ಸೆಂಟ್ಸ್ ಜಾಗದಿಂದ, ಒಂದು ಮನುಷ್ಯ ಇಡೀ ದೇಶಕ್ಕೆ ಒಂದು ಜಾಣ್ಮೆಯ ಗಂಟೆ ಹೊಡೆಯುತ್ತಾನೆ. ಅವರೇ ಸತ್ಯನಾರಾಯಣ ಬೆಳೇರಿ. ಈ ಪುಸ್ತಕವು ಒಂದು ವ್ಯಕ್ತಿಯ ಜೀವನಚರಿತ್ರೆ ಮಾತ್ರವಲ್ಲ. ಇದು ಒಂದು ತತ್ವದ ಪಯಣ. ನೆಲ ಇಲ್ಲದವನು ಗದ್ದೆ ಕಟ್ಟಿಕೊಂಡ ಕಥೆ. ಭೂಮಿ ಕಡಿಮೆ ಇದ್ದರೂ ಮನಸ್ಸು ವಿಶಾಲವಾಗಿದ್ದರೆ ಎಷ್ಟು ದೊಡ್ಡ ಕೆಲಸ ಸಾಧ್ಯ ಎಂಬುದಕ್ಕೆ ಜೀವಂತ ಸಾಕ್ಷಿ. ಸಾವಿರಾರು ತಳಿಗಳ ನೆನಪು ಮಣ್ಣಿನೊಳಗೆ ನಿದ್ರಿಸುತ್ತಿರುವಾಗ, ಅವುಗಳನ್ನು ಎಚ್ಚರಿಸಿ ಮತ್ತೆ ಬದುಕಿಗೆ ತರುವ ಹಠದ ಕಥೆ. ಪ್ರತಿಯೊಂದು ಬೀಜದೊಳಗೊಂದು ಇತಿಹಾಸ ಇದೆ ಎಂಬ ಅರಿವಿನ ಕಥೆ. ಪ್ರತಿಯೊಂದು ತಳಿಯೊಳಗೊಂದು ಚಿಕಿತ್ಸೆಯ ಶಕ್ತಿ ಇದೆ ಎಂಬ ನಂಬಿಕೆಯ ಕಥೆ. ಸತ್ಯನಾರಾಯಣರ ಬದುಕು ಯಾವುದೇ ಸಂಭ್ರಮದ ಅಬ್ಬರದಿಂದ ಆರಂಭವಾಗಿಲ್ಲ. ಬಡತನದ ಮಡಿಲಲ್ಲೇ ಹುಟ್ಟಿ, ದುಡಿಮೆಯ ನೆರಳಲ್ಲೇ ಬೆಳೆದು, ಓದಿನ ಅವಕಾಶದಿಂದ ದೂರ ನಿಂತು, ಆದರೂ ಓದನ್ನೇ ಉಸಿರಾಗಿ ಮಾಡಿಕೊಂಡ ವ್ಯಕ್ತಿಯ ಈ ಪಯಣ, ನಮಗೆ ಮನುಷ್ಯನ ಒಳಗಿನ ಹಠದ ಸಾಮರ್ಥ್ಯವನ್ನು ತೋರಿಸುತ್ತದೆ. ಕೃಷಿ ಕಾರ್ಮಿಕನಾಗಿ ಮೂವತ್ತು ವರ್ಷ ದುಡಿದ ಕೈಗಳು, ಕೇವಲ ಶ್ರಮಕ್ಕೆ ಸೀಮಿತವಾಗದೆ, ಜ್ಞಾನಕ್ಕೆ, ಸಂಶೋಧನೆಗೆ, ಸಂರಕ್ಷಣೆಗೆ ಮುಟ್ಟಿದಾಗ ಏನೆಲ್ಲ ಸಾಧ್ಯವೋ ಎಂಬುದನ್ನು ಈ ಬದುಕು ಹೇಳಿಕೊಡುತ್ತದೆ.

